ಪ್ರಿಯ ಸಂಗಾತಿಗಳೇ,
ಮತ್ತೆ ಸಂಘಟನೆಗೆ ಶಕ್ತಿ ಸಂಚಯನವಾಗಿದೆ. ಮತ್ತೆ ಸಂಘಟನೆಯ ಪತ್ರಿಕೆ ಪ್ರಕಟವಾಗುತ್ತಿದೆ. ಮತ್ತೆ ಸಂಘಶಕ್ತಿಯ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ವೇದಿಕೆಯು ಗಟ್ಟಿಗೊಳ್ಳುತ್ತಿದೆ. ಇದು ಸಂತೋಷದ ಸುದ್ದಿ.

ಇದೇ ಕಾಲಘಟ್ಟದಲ್ಲಿ ಸದ್ದಿಲ್ಲದೆ ಮೇ ದಿನವೂ ಬಂದುಹೋಗಿದೆ. ವಿದಾನಸಭೆ ಚುನಾವಣೆಯ ಗದ್ದಲದಲ್ಲಿ ಕಾರ್ಮಿಕ ದಿನಾಚರಣೆ ಹಿಂದೆ ಸರಿದಿದೆ. ಆದರೆ ಕಾರ್ಮಿಕರ ಸಮಸ್ಯೆಗಳಿಗೆ, ಸಂಕಟಗಳಿಗೆ ಹಿಂದೆ ಸರಿಯುವ ಅವಕಾಶ ಇಲ್ಲವಲ್ಲ. ಅವು ನಿತ್ಯ ನಮ್ಮ ಕುಟುಂಬಗಳಲ್ಲಿ ಹಲವು ವಿನ್ಯಾಸಗಳಲ್ಲಿ ಕಾಣಿಸುತ್ತಲೇ ಇರುತ್ತದೆ. ಆದಾಯಕ್ಕೂ ಖರ್ಚಿಗೂ ಇರುವ ವ್ಯತ್ಯಾಸ ಹೆಚ್ಚಿದಂತೆಲ್ಲಾ ಈ ಸಮಸ್ಯೆಗಳ ಭೂತ ದೊಡ್ಡದಾಗುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ದಿನಗೂಲಿ ಕಾರ್ಮಿಕರು ಮಾತ್ರವಲ್ಲ, ಬರಹಗಾರರು, ತಂತ್ರಜ್ಞರು ಎಲ್ಲರೂ ಕಷ್ಟದಲ್ಲಿರುವುದು ಜೂನ್ ತಿಂಗಳಲ್ಲಿ ಮಕ್ಕಳನ್ನು ಮರಳಿ ಶಾಲೆಗೆ ಕಳಿಸುವ ಸಂದರ್ಭದಲ್ಲಿ ಧುತ್ತೆಂದು ಕಣ್ಣೆದುರಿಗೆ ಬರುತ್ತದೆ. ಈಗ ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದೆ. ಹಲವು ಬಡವರಿಗೆ ಸಹಾಯ ಆಗಬಹುದಾದ ಯೋಜನೆಗಳನ್ನು ಪ್ರಕಟಿಸಿದೆ. ಅದರಿಂದ ಎಲ್ಲಾ ಸಮಸ್ಯೆಗೂ ಅಲ್ಲವಾದರೂ ಕೆಲವಕ್ಕಾದರೂ ಸಣ್ಣ ಪರಿಹಾರ ಸಣ್ಣ ಅವಧಿಗೆ ದೊರೆಯಬಹುದು. (ಈ ಬಗೆಯಲ್ಲಿ ಸರ್ಕಾರಗಳು ಕೊಡುವ ಸೌಲಭ್ಯವನ್ನು ವಿರೋಧಿಸುವವರೂ, ಹೀಗಳೆಯುವವರೂ ಸಹ ನಮ್ಮ ನಡುವೆಯೇ ಇದ್ದಾರೆ. ಅವರಿಗೆ ಬಡವರ ಮನೆಗೆ ಆಗಬಹುದಾದ ಒಳಿತುಗಳನ್ನು ಮತ್ತಷ್ಟು ತಿಳಿಹೇಳಬೇಕಿದೆ.)
ಇಂತಹ ಕಾಲಘಟ್ಟದಲ್ಲಿ ಸಂಘಟನೆಗೆ ಶಕ್ತಿ ಸಂಚಯನವಾಗಿ ಹೊಸ ಮುಖಗಳು ಪದಗ್ರಹಣ ಮಾಡಿರುವುದು ಸಹ ಸಂತೋಷದ ವಿಷಯವೇ. ಹೀಗೆ ಪದಾಧಿಕಾರಿಗಳಾದವರು ಮೊದಲಿಗೆ ತೆರೆದ ಕಿವಿ, ಮುಕ್ತ ಹೃದಯ ಇರುವವರಾಗಬೇಕು. ದೂರುಗಳು, ವಿಮರ್ಶೆಗಳು, ಅಭಿಪ್ರಾಯಗಳು, ಸಂಕಟಗಳು ಮಾತ್ರವಲ್ಲ ಎಲ್ಲ ಬಗೆಯ ಮಾತುಗಳನ್ನು ಬೇಸರವಿಲ್ಲದೆ ಕೇಳುವಂತವರಾಗಬೇಕು. ಹತ್ತರಲ್ಲಿ ನಾಲ್ಕರಷ್ಟನ್ನಾದರೂ ಪರಿಹರಿಸಲು ದಾರಿಗಳನ್ನು ಹುಡುಕಬೇಕು. ಇದೇ ಕೊಂಚ ಕಷ್ಟದ ವಿಷಯ. ಇಂದಿನ ದಿನಮಾನದಲ್ಲಿ ಕೈಗೆ ಮೊಬೈಲು, ಇಂಟರ್ನೆಟ್ಟು ಸಿಕ್ಕಿದ ಮೇಲೆ ಸೋಷಿಯಲ್ ಮೀಡಿಯಾದಲ್ಲಿಯೇ ಹೆಚ್ಚು ಕಾಲ ಕಳೆಯುವ ಮಂದಿ ಹೆಚ್ಚು. ಅವರಿಗೆ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟಿಗೆ ಬರುವ ಲೈಕು, ಕಾಮೆಂಟುಗಳದ್ದೇ ಚಿಂತೆ. ಇಂತಹ ಆಕಾಶಮಾರ್ಗಿಗಳು ನೆಲದ ಮೇಲೆ ಇರುವವರ ಸಂಕಟ ಕೇಳಲು ಬಿಡುವು ಮಾಡಿಕೊಳ್ಳುವುದೇ ಕಷ್ಟ. ಹಾಗಾಗದೆ ನಮ್ಮ ಸಂಘಟನೆಯ ಎಲ್ಲಾ ವಲಯಗಳ ಹಲಬಗೆಯ ಸಮಸ್ಯೆಗಳ ಪರಿಹಾರಕ್ಕೆ ಈ ಹೊಸ ಮುಖಗಳು ದುಡಿಯುವಂತಾಗಲಿ.
ಈ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಹಾಗೂ ಭಾರತದಲ್ಲಿ ನಡೆಯುತ್ತಿರುವ ಕೆಲವು ಮುಷ್ಕರಗಳನ್ನು ಕುರಿತು ಹೇಳಬೇಕು. ಅಮೇರಿಕಾದ ರೈಟರ್ಸ್ ಗಿಲ್ಡ್ (WGA) ಕಳೆದ ಒಂದು ತಿಂಗಳಿಂದ ಮುಷ್ಕರ ಮಾಡುತ್ತಿದೆ. ಸಮಾನ ಕೆಲಸಕ್ಕೆ ಸಮಾನ ಸಂಬಳ, ಭತ್ಯೆ ಮತ್ತು 2008ರ ಒಪ್ಪಂದದ ನವೀಕರಣ ಈ ಮುಷ್ಕರದ ಪ್ರಧಾನ ಬೇಡಿಕೆಗಳು. ಈ ಹಿಂದೆ ರೈಟರ್ಸ್ ಗಿಲ್ಡ್ 2007-08ರ ನಡುವೆ ನೂರು ದಿನಗಳ ಕಾಲ ಮುಷ್ಕರ ಮಾಡಿತ್ತು. ಬರಹಗಾರರ ಸಂಬಳವನ್ನು ಹೆಚ್ಚಿಸಲು ನಿರ್ಮಾಪಕರ ವಲಯದವರ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಅದಾಗಿ ದಶಕಗಳು ಕಳೆದಿವೆ. ಈಗ ಮತ್ತೆ ಒಪ್ಪಂದಗಳು ಬದಲಾಗಬೇಕು ಎಂಬ ಮುಷ್ಕರ ನಾಲ್ಕು ವಾರ ದಾಟಿದೆ. ಏನಾಗುವುದೋ ನೋಡಬೇಕು. ಜಾಗತಿಕವಾಗಿ ಆಗಿರುವ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಹಣ ಹೂಡುವ ನಿರ್ಮಾಪಕರು ಸಹ ಹಲಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೂಡಿದ ಬಂಡವಾಳ ಹಿಂಪಡೆಯುವುದೇ ಕಷ್ಟ ಎಂಬ ಕಾಲದಲ್ಲಿ ನಿರ್ಮಾಪಕರು ಸಹ ನಟ ಸಮೂಹವನ್ನು ಸಂಬಳ ತಗ್ಗಿಸಲು ಬೇಡಿಕೆ ಇಡುತ್ತಿದ್ದಾರೆ. ಇಂತಹ ಕಾಲದಲ್ಲಿ ರೈಟರ್ಸ್ ಗಿಲ್ಡ್ ಅವರು ನಡೆಸುತ್ತಾ ಇರುವ ಸಮಾನ ವೇತನದ ಮುಷ್ಕರ ಫಲಪ್ರದವಾಗುವುದೇ ಎಂದು ಕಾದು ನೋಡಬೇಕು.
ಮುಷ್ಕರಗಳ ಇತಿಹಾಸದಲ್ಲಿ ಮೊದಲನೆಯದು ಎಂದು ದಾಖಲೆ ಸಹಿತ ಸಿಗುವುದು ಕ್ರಿಸ್ತಪೂರ್ವ 1152ರಲ್ಲಿ ಈಜಿಪ್ಟಿನ ಕಾರ್ಮಿಕರ ಮುಷ್ಕರ. ಪಿರಮಿಡ್ ಕಟ್ಟುವ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರು ತಮ್ಮ ಸಂಬಳಗಳನ್ನು ನೀಡಲಾಗಿಲ್ಲ ಎಂದು ಫ್ಯಾರೋ ರಾಮೆಸೆಸ್ ಥ್ರೀ ಸಮಾಧಿಯ ಎದುರು ಮುಷ್ಕರ ಮಾಡುತ್ತಾರೆ. ನಂತರ ಟೆಟ್ಮೂಸ್ ದೇವಾಲಯದ ಎದುರಿಗೂ ಮುಷ್ಕರ ಮಾಡುತ್ತಾರೆ. ಹಲವು ವರ್ಷಗಳ ಕಾಲ ನಡೆದ ಈ ಮುಷ್ಕರದಲ್ಲಿ ಅಂತಿಮವಾಗಿ ಕಾರ್ಮಿಕರ ಸಂಬಳವನ್ನು ಬಿಡುಗಡೆ ಮಾಡಲಾಗುತ್ತದೆ ಮತ್ತು ದಿನಗೂಲಿಯನ್ನು ಸಹ ಹೆಚ್ಚಿಸಲಾಗುತ್ತದೆ ಎಂಬುದು ಈ ಮುಷ್ಕರದ ಫಲ. ಆದರೂ ಈ ಬಗೆಯಲ್ಲಿ ಒಕ್ಕೊರಲಿನಿಂದ ಕಾರ್ಮಿಕರು ಬೇಡುವಂತಹ ಸಂಘಟನೆಗಳು ಹುಟ್ಟುವುದಕ್ಕೆ ಕೈಗಾರಿಕಾ ಕ್ರಾಂತಿ ಎಂಬುದು ಹದಿನೇಳು ಹದಿನೆಂಟನೇ ಶತಮಾನದಲ್ಲಿ ಆಗುವವರೆಗೆ ಕಾಯಬೇಕಾಯಿತು. ಕಾರ್ಮಿಕರು ತಾವು ದುಡಿಯುವ ಜಾಗಗಳನ್ನು ಸ್ವಚ್ಛವಾಗಿ ಮತ್ತು ಹೆಚ್ಚು ಗಾಳಿ, ಬೆಳಕು ಇರುವ ಜಾಗವಾಗಿ ಇರಬೇಕೆಂದು, ತಮ್ಮ ಆರೋಗ್ಯ ವೆಚ್ಚವನ್ನು ಸರ್ಕಾರ ವಹಿಸಿಕೊಳ್ಳಬೇಕೆಂದು ಬಯಸಿ ಮಾಡಿದ ಏಪ್ರಿಲ್ 1842ರಲ್ಲಿ ನಡೆದ ಮುಷ್ಕರವನ್ನು ಆಗಿನ ಸರ್ಕಾರ ಬೆಂಬಲಿಸಲಿಲ್ಲ. ಆಗ ಕೇವಲ ಸ್ಟಾಟ್‌ಫೋರ್ಡ್ಷೈರ್‌ನಲ್ಲಿ ಆರಂಭವಾಗಿದ್ದ ಮುಷ್ಕರ ನಂತರ ಡೂಂಡಿ, ವೇಲ್ಸ್, ಕಾರ್ನ್ವಾಲ್ ಪಟ್ಟಣಗಳಿಗೂ ಹರಡಿ ಒಟ್ಟು ಐದು ಲಕ್ಷ ಕಾರ್ಮಿಕರು ಮಾಡಿದ ಮುಷ್ಕರಕ್ಕೆ ಸರ್ಕಾರ ಮಣಿಯಬೇಕಾಯಿತು.
ಈ ಬಗೆಯ ಮುಷ್ಕರಗಳು ಅಲ್ಲಿಂದಾಚೆಗೆ ಹಲವು ಕಾರಣಗಳಿಗೆ ಆಗುತ್ತಲೇ ಇವೆ. ಆದರೆ ಹೊಸ ಶತಮಾನದಲ್ಲಿ ಮುಕ್ತ ಮಾರುಕಟ್ಟೆ ನೀತಿಯು ಸಂಪೂರ್ಣವಾಗಿ ಜಾರಿಗೆ ಬಂದಮೇಲೆ ಸಂಘಟನೆಗಳ ಶಕ್ತಿ ಕುಂಠಿತವಾಗಿದೆ. ಹೀಗಾಗಿ 2009ರಿಂದಾಚೆಗೆ ಶೇಕಡ ಹತ್ತರಷ್ಟು ಜನ ಪ್ರತಿವರ್ಷ ತಾವು ದುಡಿಯುತ್ತಿದ್ದ ಕಂಪೆನಿಗಳನ್ನು ಬಿಟ್ಟು ಹೋಗುತ್ತಾ ಇದ್ದಾರೆ. ಈ ಹಿನ್ನೆಲೆಯಲ್ಲಿ 2022ರಲ್ಲಿ ಜಾಗತಿಕವಾಗಿ ನಾಲ್ಕುನೂರಕ್ಕೂ ಹೆಚ್ಚು ಮುಷ್ಕರಗಳು ಆಗಿವೆ ಎಂಬ ವರ್ಲ್ಡ್ ಲೇಬರ್ ಆರ್ಗನೈಸೇಷನ್ನಿನವರ ಮಾಹಿತಿ ಗಮನಿಸಬೇಕಾದುದು. 2002ರ ಬಹುಮುಖ್ಯ ಮುಷ್ಕರ ಎನ್ನಬಹುದಾದ್ದು ಮುವ್ವತ್ತಾರು ಸಾವಿರ ವಿದ್ಯಾರ್ಥಿಗಳು, ಸಂಶೋಧಕರು ಆರು ತಿಂಗಳ ಕಾಲ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯಲ್ಲಿ ಮಾಡಿದ ಮುಷ್ಕರ. ಆರು ತಿಂಗಳ ಮಾತುಕತೆಯ ನಂತರ ವಿವಿಯ ಅಧಿಕಾರ ವರ್ಗ ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ನೀಡುವ ಭತ್ಯೆಯನ್ನು ಹೆಚ್ಚಿಸುವ ಹಾಗೂ ವಿದ್ಯಾರ್ಥಿ ಶುಲ್ಕ ತಗ್ಗಿಸುವ ಒಪ್ಪಂದ ಮಾಡಿಕೊಂಡಿತು.
ಈ ಹಿನ್ನೆಲೆಯಲ್ಲಿ ಅದಾಗಲೇ ಚರ್ಚಿಸಿದ ಅಮೇರಿಕಾ ರೈಟರ್ಸ್ ಗಿಲ್ಡ್ ನಡೆಸುತ್ತಿರುವ ಮುಷ್ಕರವಲ್ಲದೆ ಅಮೇರಿಕಾ ನಿರ್ದೇಶಕರ ಒಕ್ಕೂಟ ಸಹ ಜೂನ್ 30ಕ್ಕೆ ಅಂತ್ಯವಾಗಲಿರುವ ಹಿಂದಿನ ಒಪ್ಪಂದಗಳ ಪುನರ್ ಪರಿಶೀಲನೆಗೆ ಬೇಡಿಕೆ ಇಟ್ಟಿದೆ. ಇಂದು ಮನರಂಜನಾ ಉದ್ಯಮವು ಎದುರಿಸುತ್ತಿರುವ ಹಲವು ಸಮಸ್ಯೆಗಳ ಹಿನ್ನೆಲೆಯಲ್ಲಿ ಈ ಮುಷ್ಕರಗಳಿಗೆ ಶೀಘ್ರ ಪರಿಹಾರ ದೊರೆಯುವುದು ಅನುಮಾನವೇ. ಆದರೂ ಅಲ್ಲೇನಾಗುತ್ತದೆ ಎಂಬುದು ನಮ್ಮ ಉದ್ಯಮಕ್ಕೆ ಮಾದರಿಯಾಗಬಹುದು.
ನಮ್ಮಲ್ಲಿಯೂ ಬೆಳಕು ವಿನ್ಯಾಸಕ ವಲಯದ ಕಾರ್ಮಿಕರು ಭತ್ಯೆ ಹೆಚ್ಚಿಸಲು ಮನವಿ ಸಲ್ಲಿಸಿ, ಕೆಲವು ತಿಂಗಳ ಹಿಂದೆ ಒಪ್ಪಂದಗಳಾಗಿವೆ. ಆದರೆ ನಿರ್ಮಾಣ ನಿರ್ವಾಹಕರ, ವಾಹನ ಚಾಲಕರ ಮನವಿಗಳು ಇನ್ನೂ ತೀರ್ಮಾನವಾಗಿ ಒಪ್ಪಂದಗಳಾದಂತಿಲ್ಲ. ಹಾಗೆಯೇ ಪ್ರಸಾಧನ ವಲಯ, ಬರಹಗಾರರ ವಲಯ ಮುಂತಾದ ಹಲವು ವಲಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಕೂಲಂಕಷವಾಗಿ ಚರ್ಚಿಸಿ ತೀರ್ಮಾನ ಮಾಡಬೇಕಿದೆ.
ಇಂತಹ ಕಾಲಘಟ್ಟದಲ್ಲಿ ಹೊಸ ಪದಾಧಿಕಾರಿಗಳಿಗೆ ಸ್ವಾಗತ ಹೇಳುತ್ತಲೇ, ನಿಮ್ಮೆದುರು ಇರುವ ಬೃಹತ್ ಬೇಡಿಕೆಗಳ ಪಟ್ಟಿಯನ್ನು ಅನುಕಂಪದಿಂದ ಮತ್ತು ದುಡಿವ ವರ್ಗದ ಮೇಲಿನ ಪ್ರೀತಿಯಿಂದ ಪರಿಶೀಲಿಸಿ, ಪರಿಹಾರಕ್ಕೆ ದಾರಿ ಹುಡುಕಿರಿ ಎಂದು ಎಲ್ಲರ ಪರವಾಗಿ ಕೇಳಬೇಕಿದೆ.
