ಕೆಟಿವಿಎ ಸದಸ್ಯರು ಎಲ್ಲರಲ್ಲಿಯೂ ಹಂಚಿಕೊಳ್ಳಬೇಕಾದ ಸಂತಸದ ಸುದ್ದಿಯೊಂದು ಇಲ್ಲಿದೆ.
ಇಷ್ಟು ವರುಷ ಸಂಘಕ್ಕೆ ಅಚ್ಚುಕಟ್ಟಾದ, ಅನುಕೂಲಕರವಾದ ಕಚೇರಿ ದೊರೆತಿರಲಿಲ್ಲ. ಹಾಗಾಗಿ ಕಚೇರಿಯ ಕಡೆತಗಳನ್ನು, ಇತರೆ ದಾಖಲೆಗಳನ್ನು, ಪೀಠೋಪಕರಣ ಇತ್ಯಾದಿಗಳನ್ನು, ಅಚ್ಚುಕಟ್ಟಾಗಿ ಜೋಡಿಸಿಕೊಳ್ಳಲು ಕೂಡ ಆಗುತ್ತಿರಲಿಲ್ಲ. ಈ ಸಮಸ್ಯೆಗೆ ಪರಿಹಾರ ಸೂಚಿಸಿದ್ದ ಕಾರ್ಯದರ್ಶಿಗಳಾದ ಸೃಜನ್ ಲೋಕೇಶ್ ಅವರು ಕತ್ರಿಗುಪ್ಪೆಯಲ್ಲಿ ವಿಶಾಲವಾದ ಆಫೀಸ್ ಒಂದನ್ನು ತೆರೆಯಲು ಅನುಕೂಲಗಳನ್ನು ಮಾಡಿಕೊಟ್ಟಿದ್ದರು. ಅದಕ್ಕೆ ಸಮಸ್ತ ಕೆಟಿವಿಎ ಸದಸ್ಯರನ್ನು ಚುನಾವಣೆಯ ನಂತರ ಆಹ್ವಾನಿಸಿ ವಿಜೃಂಭಣೆಯಿಂದ ಗೃಹಪ್ರವೇಶ ಕೂಡಾ ಮಾಡಲಾಗಿತ್ತು.
ಇದೀಗ ಇದು ಇನ್ನೂ ಒಂದು ಹಂತಕ್ಕೆ ಬಡ್ತಿ ಪಡೆದಿದೆ. ಬಹಳ ದಿನಗಳಿಂದಲೂ ಕರ್ನಾಟಕ ಟೆಲಿವಿಷನ್ ಕಲ್ಚರಲ್ ಕ್ಲಬ್ ಆವರಣದಲ್ಲಿ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸಂಸ್ಥೆಗೆ ಒಂದು ಕಛೇರಿ ಜಾಗ ಕೊಡುವ ಕುರಿತು ಚರ್ಚೆಗಳು ನಡೆದಿದ್ದವು. ಕಾನೂನಾತ್ಮಕವಾದ ಪ್ರಕ್ರಿಯೆಗಳು ಅಡ್ಡ ಬಂದಿದ್ದರಿಂದ ಅದು ಸಾಕಷ್ಟು ಬಾರಿ ಮುಂದೆ ಹೋಗಿತ್ತು. ಆದರೆ ಈ ಬಾರಿ ಕೆಟಿವಿಎ ಆಡಳಿತ ಮಂಡಳಿ ಗಂಭೀರವಾದ ಪ್ರಯತ್ನಗಳನ್ನು ಮಾಡಿ ಕಲ್ಚರಲ್ ಕ್ಲಬ್‌ನ ಆಡಳಿತ ಮಂಡಳಿಯ ಮನವೊಲಿಸಲು ಮುಂದಾಯಿತು. ಎಷ್ಟೋ ವರುಷಗಳಿಂದ ದೂರಾಗಿದ್ದ ಒಂದೇ ಮನೆಯ ಅಣ್ಣತಮ್ಮಂದಿರು ಮತ್ತೆ ಒಂದಾದ ಹಾಗೆ ಈಗ ಕರ್ನಾಟಕ ಟೆಲಿವಿಷನ್ ಕಲ್ಚರಲ್ ಕ್ಲಬ್ ಕೆಟಿವಿಎ ಸಂಸ್ಥೆಯ ಜೊತೆ
ಕೈಸೇರಿಸಿದೆ. ಸಂಸ್ಥೆಯ ಕಚೇರಿಗಾಗಿ ಅನುಕೂಲಕರವಾದ ಸ್ಥಳವನ್ನು ದೊರಕಿಸಿಕೊಟ್ಟಿದೆ. ಪ್ರಸ್ತುತ ಕತ್ರಿಗುಪ್ಪೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಛೇರಿಗಿಂತಲೂ ಹೆಚ್ಚು ವಿಶಾಲವಾದ ಕಚೇರಿಯನ್ನು ಅಲ್ಲಿ ನಿರ್ಮಿಸುವ ಆಲೋಚನೆಯಿಂದ ಅದಕ್ಕಾಗಿ ವಿಧ್ಯುಕ್ತವಾಗಿ ಪೂಜೆ ಸಲ್ಲಿಸಿ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಅತಿ ಶೀಘ್ರದಲ್ಲಿಯೇ ಎಲ್ಲ ಕೆಲಸ ಕಾರ್ಯಗಳು ಮುಕ್ತಾಯವಾಗಿ ಸಂಸ್ಥೆಯು ಅಲ್ಲಿ ನಿರಂತರವಾಗಿ ಮತ್ತು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಕಾರ್ಯನಿರ್ವಹಿಸಲು ಅನುಕೂಲವಾಗಲಿದೆ ಎಂಬ ಈ ವಿಷಯವನ್ನು ತಮ್ಮೆಲ್ಲರಿಗೆ ತಿಳಿಸಲು ಕೆಟಿವಿಎ ಕಾರ್ಯಕಾರಿ ಮಂಡಳಿ ಹರ್ಷಿಸುತ್ತದೆ. ಕೆಲವೇ ದಿನಗಳ ಹಿಂದೆ ಕಾಮಗಾರಿ ಆರಂಭಿಸುವ ಮುಂಚೆ ವಿಘ್ನನಿವಾರಕ ಶ್ರೀ ವಿನಾಯಕನ ಪೂಜೆಯನ್ನು ಸಾಂಗವಾಗಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕೆಟಿವಿಎ ಅಧ್ಯಕ್ಷರಾದ ಶ್ರೀ ರವಿ ಆರ್ ಗರಣಿ, ಪದ್ಮಾವಾಸಂತಿ, ಗಣೇಶ್‌ರಾವ್, ಆನಂದ್, ಬುಕ್ಕಾಪಟ್ಟಣ ವಾಸು, ಭಾಸ್ಕರ್, ಸಂಜೀವ್ ತಗಡೂರ್, ಸತೀಶ್ ಕೃಷ್ಣನ್ ಸೇರಿದಂತೆ ಕೆಟಿವಿಎ ನ ಅನೇಕ ಹಿತೈಷಿಗಳು ಅಲ್ಲಿ ಸೇರಿ ಕಾಮಗಾರಿಗೆ ಶುಭ ಹಾರೈಸಿದರು. ಅದರ ಚಿತ್ರ ಮಾಲಿಕೆ ಇಲ್ಲಿ ನಿಮಗಾಗಿ.
ಎಂ ಎಲ್ ಪ್ರಸನ್ನ
