
ಆರಂಭದ ದಿನಗಳಿಂದಲೂ ನಾವು ಇದೊಂದು ಸಮಸ್ಯೆ ಎದುರಿಸುತ್ತಿದ್ದೇವೆ. ಕೆಟಿವಿಎ ಯಾಕಿದೆ? ನಾವು ಯಾವುದೇ ಸಮಸ್ಯೆ ಮುಂದೆ ತಗೊಂಡು ಹೋದರೂ ಅಲ್ಲಿಂದ ಯಾವುದೇ ಪರಿಹಾರ ಸಿಕ್ತಾ ಇಲ್ಲಾ. ಇದಕ್ಕೇನು ಹೇಳಲಿ? ಇದು ನಿಜಕ್ಕೂ ನನಗೆ ಒಮ್ಮೊಮ್ಮೆ ಬೇಸರ ಮತ್ತು ಆಶ್ಚರ್ಯದ ಸಂಗತಿ. ಅರೆ! ಕೆಟಿವಿಎ ಇರೋದು ನಿರ್ದಿಷ್ಟ ಗುರಿಯೊಂದಿಗೆ ಸಮಾನಮನಸ್ಕರು ಎಲ್ಲರನ್ನೂ ಒಗ್ಗೂಡಿಸೋದಕ್ಕೆ. ಅದು ನ್ಯಾಯಾಲಯ ಅಲ್ಲ. ರಾಜಿ ಪಂಚಾಯಿತಿ ಕಟ್ಟೆ ಅಲ್ಲಾ. ಅದಕ್ಕೆಲ್ಲಾ ಯಾವುದೇ ಸಾಂವಿಧಾನಿಕ ಅಧಿಕಾರಗಳಿಲ್ಲಾ. ಕಾನೂನುಗಳನ್ನು ರೂಪಿಸಲು ಆಗುವುದಿಲ್ಲಾ. ಮುರಿಯುವುದಕ್ಕೂ ಅಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಕೆಟಿವಿಎ ಅನ್ನೋದು ಕೇವಲ ದೂರುಗಳನ್ನ ದಾಖಲಿಸುವಂತಹ ಸಂಸ್ಥೆ ಆಗಬಾರದು. ನಾವೆಲ್ಲರೂ ಸೇರಿ ಯಾವುದೇ ಸಮಸ್ಯೆಗಳು ಆಗದೇ ಇರುವ ಹಾಗೆ ನೋಡಿಕೊಳ್ಳೋದು, ಒಂದು ವೇಳೆ ತೊಂದರೆ ಆದ ಪಕ್ಷದಲ್ಲಿ ಅದಕ್ಕೆ ಯಾವ ರೀತಿ ಪರಿಹಾರ ಕಂಡುಕೊಳ್ಳಬೇಕು ಅನ್ನೋದು ಇಲ್ಲಿ ಬಹಳ ಮುಖ್ಯವಾಗಿರುವಂತದ್ದು.
ಈ ನಮ್ಮ ಕೆಟಿವಿಎ ಸಂಘಟನೆ ಅನ್ನುವಂತದ್ದು ಯಾವಾಗ ಬಲವಾಗುತ್ತದೆ ಅಂದರೆ ನಾವುಗಳು ಎಲ್ಲರೂ ಒಟ್ಟಿಗೆ ಸೇರಿದಾಗ ಮಾತ್ರ ಅದು ಸಾಧ್ಯ. ಎಲ್ಲರೂ ಹಲವಾರು ವಿಚಾರಗಳಲ್ಲಿ ಬಿಡುವಿಲ್ಲದೇ ಇರುವುದು ಸರ್ವೇ ಸಾಮಾನ್ಯ… ಆದರೆ ಕನಿಷ್ಟಪಕ್ಷ ಇವತ್ತಿನ ಒಂದು ಪ್ರಮುಖ ಒತ್ತಡಗಳು

ಏನಿದಾವೆ, ಜೀವನದ ಒತ್ತಡ, ಕೆಲಸದ ಒತ್ತಡ, ಸ್ಪರ್ಧಾತ್ಮಕ ಒತ್ತಡ ಇವುಗಳಿಗೆಲ್ಲ ಹೊರತು ಪಡಿಸಿ, ನಮ್ಮೆಲ್ಲ ಕಲಾವಿದರು, ತಂತ್ರಜ್ಞರು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್‌ನ ಅಡಿಯಲ್ಲಿ ನಡೆಯುವಂತಹ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು. ಒಂದೇ ಮನೆಯಲ್ಲಿದ್ದೂ ಮುಖಮುಖ ನೋಡಲಾಗದ ಕಷ್ಟಸುಖಗಳು ಹಂಚಿಕೊಳ್ಳಲಾಗದ ಜನಕ್ಕೆ ಹಬ್ಬ ಹರಿದಿನಗಳು ಹೇಗೆ ಮನಸ್ಸು ತೆರೆದುಕೊಳ್ಳಲು ಮನೆಯವರೊಂದಿಗೆ ಮಾತುಕತೆ ಆಡಲು ಸಹಾಯಕ ಆಗುತ್ತದೋ ಅದೇ ರೀತಿ ಕೆಟಿವಿಎ ಕೂಡಾ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅದನ್ನ ನಮ್ಮ ಎಲ್ಲ ಕಲಾವಿದರು ತಂತ್ರಜ್ಞರು ನಮ್ಮ ಮನೆಯ ಹಬ್ಬ ಎನ್ನು ಹಾಗೆಯೇ ಭಾವಿಸಬೇಕು ಮತ್ತು ಅದರಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ನೋಡಿ. ಇಲ್ಲಿ ಕೂಡಾ ನಾವು ಹಾಗೆ ಒತ್ತಾಯ ಮಾಡಬಹುದೋ ಹೊರತು ಕಾನೂನು ಮಾಡಲು ಆಗುವುದಿಲ್ಲಾ. ಅಂದರೆ, ಎಲ್ಲವನ್ನೂ ಕಾನೂನಿನ ಮೂಲಕ ಬಗೆಹರಿಸಲು ಸಾಧ್ಯವಿಲ್ಲಾ. ಕಾನೂನು ಕಟ್ಟಳೆಗಳಿಂದ ನಾವು ಎಲ್ಲವನ್ನೂ ಗೆಲ್ಲಲು ಆಗುವುದಿಲ್ಲ. ನಮ್ಮನಮ್ಮ ಮನಸ್ಸುಗಳನ್ನು ತೆರೆದು ಒಬ್ಬರು ಇನ್ನೊಬ್ಬರ ಜೊತೆ ಕೈಜೋಡಿಸುವುದರಿಂದ ಮಾತ್ರಾ ಎಲ್ಲರೂ ಒಟ್ಟಾಗಿ ಬೆಳೆಯಲು ಸಾಧ್ಯ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಈ ಸಂಘಟನೆಯ ಉದ್ದೇಶಕ್ಕೆ ಪ್ರಯತ್ನಕ್ಕೆ ನಾವುಗಳು ಸಹ ಏನಾದರೂ ಕೊಡುಗೆ ನೀಡಬೇಕು ಅಂತ ಮುಂದೆ ಬರೋದು ಬಹಳ ಮುಖ್ಯ ಆಗುತ್ತದೆ.
ಈ ಮಾತು ಹೇಳಲು ಬಲವಾದ ಕಾರಣ ಇದೆ. ನಿಮಗೆಲ್ಲ ತಿಳಿದಿರುವ ಹಾಗೆ ಇನ್ನೇನು ಕೆಲವೇ ತಿಂಗಳುಗಳಲ್ಲಿ ಕೆಟಿವಿಎಗೆ 25ನೇ ವರ್ಷದ ಸಂಭ್ರಮ. 25 ವರ್ಷಕ್ಕೆ ಕೆಟಿವಿಎ ಇನ್ನೂ ಎಲ್ಲೋ ಬೆಳೆದಿರಬೇಕಿತ್ತು ಎಂದು ಮನಸ್ಸು ವಿಷಾದಿಸುತ್ತದೆ. ಅದರ ಹಿಂದೆಯೇ ಆ ವಿಷಾದವನ್ನು ಮರೆಗೆ ತಳ್ಳಿ ಈಗಲೂ ಕಾಲ ಮಿಂಚಿಲ್ಲಾ ಎನಿಸುತ್ತದೆ. ಎಲ್ಲ ಉತ್ಸಾಹವನ್ನು ಒಗ್ಗೂಡಿಸಿಕೊಂಡು ಸಂಘವನ್ನು ಮರಳಿ ಬಲವಾಗಿ ಕಟ್ಟೋಣ ಎಂದು ಕೂಡಾ ಮನಸ್ಸು ಆಶಿಸುತ್ತದೆ. ನಮ್ಮ ಇಡೀ ತಂಡದಲ್ಲಿ ಇಂಥದ್ದೊಂದು ರಣೋತ್ಸಾಹ ತುಂಬಿರುವುದರಿಂದಲೇ ತಂಡದ ಬಹುತೇಕರು ಕೆಟಿವಿಎ ಕಾರ್ಯಕ್ರಮಗಳನ್ನು ತಮ್ಮ ಮನೆಯ ಕಾರ್ಯಕ್ರಮ ಎಂದೇ ಪರಿಗಣಿಸಿ ಅದರಲ್ಲಿ ಉತ್ಸಾಹ ತೋರುತ್ತಿದ್ದಾರೆ. ಅದರಲ್ಲೂ ಈಗ ಬೆಳ್ಳಿಹಬ್ಬದ ಸಂಭ್ರಮವನ್ನು ಹಬ್ಬವಾಗಿಯೇ ಆಚರಿಸಬೇಕು ಎಂಬುದು ನಮ್ಮ ಯೋಚನೆ. ಈ ನೆಪದಲ್ಲಿ ಈಗಲೂ ಸಹಾ ಸಂಘದ ಕಡೆ ಇನ್ನೂ ತಿರುಗಿ ನೋಡದ ಮನಸ್ಸುಗಳನ್ನೂ ನಾವು ಸೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ. ನಿಜವಾಗಿ ಹಬ್ಬದ ನೆಪದಲ್ಲಿ ಎಲ್ಲರೂ ಒಗ್ಗೂಡಬೇಕು. ಪ್ರತಿಯೊಬ್ಬರೂ ತಮ್ಮ ಅಕ್ಕಪಕ್ಕದಲ್ಲಿರುವವರಿಗೆ ಉತ್ಸಾಹವನ್ನು ಹಂಚುವಂತಿರಬೇಕು. ಈ ಹಬ್ಬವನ್ನು ತಪ್ಪಿಸಿಕೊಂಡರೆ ಜೀವನದ ಕೆಲವು ಅಮೃತಘಳಿಗೆಗಳನ್ನು ತಪ್ಪಿಸಿಕೊಂಡ ಹಾಗೆ ಎನ್ನುವ ಭಾವನೆಗಳನ್ನು ತುಂಬುವ ಹಾಗಿರಬೇಕು. ಹಬ್ಬಕ್ಕೆ ಊರಜಾತ್ರೆಗೆ ತಪ್ಪಿಸಿಕೊಂಡರೆ ದೇವರ ಕೋಪಕ್ಕೆ ಶಾಪಕ್ಕೆ ಗುರಿಯಾಗುವ ಹೆದರಿಕೆಯಿಂದಲಾದರೂ ಸೆಳೆಯಬಹುದು. ಆದರೆ ಈ ಸಂಭ್ರಮಕ್ಕೆ ಯಾರದೇ ಕೋಪ ಶಾಪಗಳ ನೆಪಗಳಿಲ್ಲದೆ ಪ್ರೀತಿಯಿಂದ ಸೇರುವಂಥಹಾ ಸಂಭ್ರಮಿಸೋ ಮನಸ್ಸುಗಳ ಅಗತ್ಯವಿದೆ. ಒಟ್ಟಿನಲ್ಲಿ ಇದೊಂದು ಅತಿದೊಡ್ಡ ಸಂಭ್ರಮವಾಗಿ ದಾಖಲಾಗಬೇಕು. ಅದಕ್ಕೆ ಏನೇನು ಮಾಡಬೇಕು ಮಾಡಬಹುದು ಎಂದು ಎಲ್ಲರನ್ನೂ ಒಗ್ಗೂಡಿಸಿಕೊಂಡು ದೊಡ್ಡ ಯೋಜನೆಯನ್ನೇ ರೂಪಿಸಬೇಕಿದೆ. ಕೆಟಿವಿಎನ ಬೆಳ್ಳಿಹಬ್ಬವನ್ನು ನಾವೆಲ್ಲರೂ ಸೇರಿ ಅತಿ ವಿಜೃಂಭಣೆಯಿಂದ ಆಚರಣೆ ಮಾಡಬೇಕಿದೆ. ಅದಕ್ಕೆ ತಮ್ಮೆಲ್ಲರ ಸಹಕಾರ ಅತ್ಯಮೂಲ್ಯ.
ನನ್ನ ಗಮನಕ್ಕೆ ಬಂದ ಮತ್ತೊಂದು ವಿಷಯ ಏನೆಂದರೆ, ಬೇರೆ ಬೇರೆ ಭಾಷೆಗಳಲ್ಲಿನ ಹಲವಾರು ಸಂಘ ಸಂಸ್ಥೆಗಳು ಬಲವಾಗಿರುವಂತದ್ದು. ಅದಕ್ಕೆ ಮುಖ್ಯ ಕಾರಣ ಅಲ್ಲಿನ ಪ್ರತಿಯೊಬ್ಬ ಸದಸ್ಯ ಸ್ವಇಚ್ಛೆಯಿಂದ ಬಂದು ಸಂಘದ ಜೊತೆ ಪ್ರತಿ ಹಂತದಲ್ಲೂ ನಿಂತು ಸಹಕರಿಸಿರುವುದು. ಆದರೆ ನಾವುಗಳು ಇವತ್ತಿನವರೆಗೂ ಹಲವಾರು ವಿಚಾರಗಳನ್ನ ಕಾರ್ಯರೂಪಕ್ಕೆ ತರೋದಿರಲಿ ಹಂಚಿಕೊಳ್ಳುವುದಕ್ಕೂ ಯೋಚನೆ ಮಾಡ್ತಿದೀವಿ. ಇದೆಲ್ಲವೂ ಬದಲಾಗಬೇಕು, ಕೆಟಿವಿಎ ಅನ್ನೋದು ಕೇವಲ ಹೆಸರಾಗಿರಬಾರದು. ನಮ್ಮೆಲ್ಲರ ಬಲವಾಗಿರಬೇಕು… ಕೆಟಿವಿಎ ಕೇವಲ ಪದಾಧಿಕಾರಿಗಳ ಜವಾಬ್ದಾರಿಯಲ್ಲ, ಸಂಘದಲ್ಲಿರುವ ಪ್ರತಿಯೊಬ್ಬ ಸದಸ್ಯರ ಜವಾಬ್ದಾರಿ ಕೂಡ. ಎಂತಹದ್ದೇ ಸಮಸ್ಯೆಗಳು ನಮಗೆ ಎದುರಾದರೂ ನಾವೆಲ್ಲಾ ಒಟ್ಟಿಗೆ ಇದ್ದರೆ ಸುಲಭವಾಗಿ ಅವುಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಹಾಗಾಗಿ ಎಲ್ಲರೂ ಒಮ್ಮತದಿಂದ ಬಂದು ಕೆಟಿವಿಎಯನ್ನು ಗೆಲ್ಲಿಸಿ, ಕೆಟಿವಿಎಯನ್ನು ಸಧೃಡಪಡಿಸಿ.
ಮತ್ತೆ ಮುಂದಿನ ಬಾರಿ ಪತ್ರಿಕೆಯ ಮೂಲಕ ಭೇಟಿಯಾಗುವವರೆಗೂ ಬೆಳ್ಳಿಹಬ್ಬದ ಸಂಭ್ರಮಕ್ಕೆ ಏನೇನು ಮಾಡಬಹುದು ಎಂದು ಸಿಹಿಯಾದ ಕನಸುಗಳನ್ನು ಕಾಣಿರಿ. ಮುಂದಿನ ಬಾರಿ ಭೇಟಿಯಾದಾಗ ಆ ಕುರಿತು ಎಲ್ಲರೂ ನಮ್ಮನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳೋಣ.
