KTV Association - ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್
  • ಹೋಂ
  • ನಮ್ಮ ಕುರಿತು
    • ನಮ್ಮ ಪದಾಧಿಕಾರಿಗಳು
  • ಕಾರ್ಯಕ್ರಮಗಳು
  • ಯೋಜನೆಗಳು
  • ಲೇಖನಗಳು
  • ಸುದ್ಧಿಗಳು
  • ಮ್ಯಾಗಝಿನ್
  • ಗ್ಯಾಲರಿ
    • ಫೋಟೋಗಳು
    • ವೀಡಿಯೊಗಳು
  • ಸಂಪರ್ಕಿಸಿ
No Result
View All Result
KTV Association - ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್
  • ಹೋಂ
  • ನಮ್ಮ ಕುರಿತು
    • ನಮ್ಮ ಪದಾಧಿಕಾರಿಗಳು
  • ಕಾರ್ಯಕ್ರಮಗಳು
  • ಯೋಜನೆಗಳು
  • ಲೇಖನಗಳು
  • ಸುದ್ಧಿಗಳು
  • ಮ್ಯಾಗಝಿನ್
  • ಗ್ಯಾಲರಿ
    • ಫೋಟೋಗಳು
    • ವೀಡಿಯೊಗಳು
  • ಸಂಪರ್ಕಿಸಿ
No Result
View All Result
KTV Association - ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್
No Result
View All Result

ಬಿಟ್ಟರೂ ಬಿಡದೀ ಮಾಯೆ

ಬ ಲ ಸುರೇಶ್

July 9, 2023
0 0

“ದೂರದರ್ಶನ” ಮಾಯಾಪೆಟ್ಟಿಗೆ! ಕರ್ನಾಟಕದಲ್ಲಿ ಕನ್ನಡ ಕಾರ್ಯಕ್ರಮ ಪ್ರಾರಂಭಿಸಿದ ಆ ದಿನಗಳಲ್ಲಿ ಹುಟ್ಟಿದ ನಂಬಿಕೆ ಅಪನಂಬಿಕೆಯ ಹೊನಲು ಗಮಲು ಅನೇಕಾನೇಕ. ನೋಡದಿದ್ದರೂ ನೋಡಿದಂತೆ ಹೇಳಿ, ಪ್ರಚುರ ಪಡಿಸಿದ ಕಥೆಗಳು, ವಿಚಾರಗಳು ರೋಚಕ.

ದೂರದರ್ಶನ

‘ನಿಂಗ್.. ಗೊತ್ತಾ..!? ಅದು ರೇಡಿಯೋ ಗೋಡಿಗಿಂತ ಸ್ವಲ್ಪ ದೊಡ್ಡದಾಗಿದೆ ಅಷ್ಟೇ. ಮುಂದುಗಡೆ ಬಿಳಿ ತೆರೆ. ರೇಡಿಯೋದಲ್ಲಿ ಬರೀ ಧ್ವನಿ ಬರುತ್ತೆ. ಇಲ್ಲಿ ಚಿತ್ರನೂ ಇರುತ್ತೆ, ಸಿನಿಮಾತರನೇ ನೋಡ್ಬಹುದು ಮಜವಾಗಿದೆ’. ‘ಈ ದೂರದರ್ಶನದ ಟಿ.ವಿ.ಗಳಿಗೆ ಧ್ವನಿ ತರಂಗದಲ್ಲೇ ಚಿತ್ರ ಕಳುಸ್ತಾರೆ. ಆದ್ರೆ ಏನೇ ಹೇಳು, ಸಿನಿಮಾತರ ಇರಲ್ಲ. ಬಿಳಿ ತೆರೆ ಮೇಲೆ ಅಡ್ಡಸೊಡ್ಡಾಗಿ ದೃಶ್ಯ, ಪಾತ್ರ ತೇಲ್ತಾ ಇರುತ್ತೆ’. ‘ಇಲ್ಲ ಕಣೋ ಸಿಗ್ನಲ್ ಸರಿಯಾಗಿ ಇಲ್ಲದಿದ್ದಾಗ ಮಾತ್ರ ಹಾಗೆ ಆಗುತ್ತೆ, ಸಿಕ್ಕರೆ ಸಿನಿಮಾ ಸ್ಕ್ರೀನ್‌ಗೂ ಇದಕ್ಕೂ ವ್ಯತ್ಯಾಸ ಇಲ್ಲ, ಇದು ಚಿಕ್ಕ ತೆರೆ, ಅದು ದೊಡ್ಡ ತೆರೆ ಅಷ್ಟೆ’. ‘ಇಲ್ಲಿವರೆಗೆ ಪ್ರಪಂಚದ ಎಲ್ಲಾ ವಿಷಯ ಓದ್ತಾ ಇದ್ವಿ, ಕೇಳ್ತಾ ಇದ್ವಿ, ಇನ್ನು ಮುಂದೆ ಸುದ್ದಿಚಿತ್ರದಲ್ಲೂ ನೋಡ್ಬಹುದು; ಟಿ.ವಿ. ನಿಜಕ್ಕೂ ಒಂದು ಅದ್ಭುತ ಆವಿಷ್ಕಾರ’. ‘ಏನ್ ಆವಿಷ್ಕಾರನೋ.. ಇಲ್ಲಿವರೆಗೆ ಸಿನಿಮಾ, ನಾಟ್ಕ ಅದು ಇದೂ ಅಂತ ತಲೆ ಹಾಳು ಮಾಡಿದ್ದು ಸಾಲ್ದು ಅಂತ ಜನರ ಮನಸ್ಸು ಇನ್ನಷ್ಟು ಕೆಡಿಸೊದಕ್ಕೆ ವಿದೇಶದಿಂದ ಟ.ವಿ. ಬಂದಿದೆ, ಇದು ಎಲ್ಲಿಗೆ ಹೋಗಿ ಮುಟ್ಟುತ್ತೋ? ಒಂದ್ ಮಾತು ಹೇಳ್ತೀನಿ.. ಇದರಿಂದ ಉದ್ಧಾರ ಆಗೋದಕ್ಕಿಂತ ಹಾಳು ಆಗೋದೇ ಹೆಚ್ಚು; ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚಾರವಿಚಾರ, ನೈತಿಕ ಮೌಲ್ಯಗಳನ್ನು ತುಳಿಲೂಬಹುದು!’. ‘ಏ.. ಹಾಗೇನೂ ಆಗಲ್ಲ. ಇದು ಮಾಹಿತಿ, ಮನರಂಜನೆ, ಕ್ರೀಡೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಹೊಸ ಸಾಧ್ಯತೆಗಳಿಗೆ ಭವ್ಯ ಬುನಾದಿ ಆಗುತ್ತೆ.. ಇದು ಇವತ್ತು ಗೊತ್ತಾಗಲ್ಲ, ಭವಿಷ್ಯದಲ್ಲಿ ನೋಡಿ.. ಅಚ್ಚರಿಗಳ ಸರಮಾಲೆನೇ ಇದೆ!?’.

ಹೊಸ ತಂತ್ರಜ್ಞಾನದ ಆವಿಷ್ಕಾರ ಆದಾಗಲೆಲ್ಲಾ ಪರ ವಿರೋಧ ಇದ್ದಿದ್ದೇ. ಮನುಷ್ಯನ ಮಾನಸಿಕ ಸ್ಥಿತಿಯು ಅಂತದ್ದು. ಪ್ರತಿಯೊಬ್ಬರ ಅಭಿಪ್ರಾಯ, ಧೋರಣೆ, ಚಿಂತನೆ, ನಂಬಿಕೆ ಭಿನ್ನಭಿನ್ನ. ಅವನಂತೆ ನಾನಿಲ್ಲ! ನನ್ನಂತೆ ಅವನಿಗೆ ಇರಬೇಕಾದ ಅವಶ್ಯಕತೆ ಇಲ್ಲ. ದೂರದರ್ಶನದ ಕನ್ನಡ ಕಾರ್ಯಕ್ರಮ ಆರಂಭದ ದಿನಗಳಲ್ಲಿ ಕೆಲವಷ್ಟು ಹಿರಿತೆರೆ ಕಲಾವಿದರು ತಂತ್ರಜ್ಞರು, ಕಿರುತೆರೆಯಿಂದ ಅಂತರ ಕಾಯ್ದುಕೊಂಡಿದ್ದರು. ಇಲ್ಲಿನ ಮನರಂಜನಾ ಕಾರ್ಯಕ್ರಮ, ಕಿರುಚಿತ್ರ, ಸಾಕ್ಷ್ಯಚಿತ್ರ, ನಾಟಕ, ವಾರದ ಧಾರಾವಾಹಿ, ವಾರ್ತೆ ಇವೆಲ್ಲವೂ ಒಂದು ಸೀಮಿತ ಚೌಕಟ್ಟಿಗೆ ಒಳಪಟ್ಟವೆಂಬ ಅಭಿಪ್ರಾಯ ಅವರಲ್ಲಿತ್ತು. ಆದರೆ ಅಂದಿನ ದಿನಗಳಲ್ಲಿ ಕನ್ನಡ ಪತ್ರಿಕೆಗಳು, ಪತ್ರಕರ್ತರು ಕಿರುತೆರೆಗೆ ಹೆಚ್ಚಿನ ಮಹತ್ವ ಕೊಟ್ಟು ಪ್ರಚಾರ ನೀಡಿದರು ಎಂಬುದು ವಿಶೇಷ! ಕಿರುತೆರೆ ಬೆಳವಣಿಗೆಯಲ್ಲಿ ಪತ್ರಕರ್ತರ ಪಾತ್ರ ದೊಡ್ಡದಿದೆ ಎಂದರೆ ಅಚ್ಚರಿಯಲ್ಲ. ಮುಂದೆ ದೂರದರ್ಶನದೊಂದಿಗೆ ಖಾಸಗಿ ಛಾನಲ್‌ಗಳು ಒಂದೊಂದಾಗಿ ಹುಟ್ಟಿಕೊಂಡು, ವಿಶಾಲ ಹರಿವು ಪಡೆದು, ವೈವಿಧ್ಯಮಯ ಧಾರಾವಾಹಿ ಮನರಂಜನಾ ಕಾರ್ಯಕ್ರಮಗಳಿಂದ ವೀಕ್ಷಕರ ಮನೆ ಮನ ತಲುಪಿ, ವಿಸ್ಮಯಕ್ಕೆ ಕಾರಣವಾಗಿ ಮನರಂಜನಾ ಕ್ಷೇತ್ರದ ದಿಕ್ಕು ದೆಸೆಯನ್ನೇ ಬದಲಿಸಿದ್ದು ಇತಿಹಾಸ.

ಹೌದು. ನನಗಂತೂ ಇದು ‘ಬಿಟ್ಟರೂ ಬಿಡದೀ ಮಾಯೆ’. ಇಂದಿನ ನನ್ನೆಲ್ಲಕ್ಕೂ ಕಾರಣ! ಕಿರುತೆರೆ. ಅದು 1985. ಆಗ ನಾನು ಕರ್ನಾಟಕ ಜಲಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದೆ. ಅದಕ್ಕೂ ಹಿಂದೆ 1978 ರಿಂದ 1980ರ ನಡುವೆ ಮಿಲಿಟರಿಯಲ್ಲಿ ವೈರಲೆಸ್ ಆಪರೇಟರ್ ಆಗಿದ್ದು ವೈದ್ಯಕೀಯ ನಿವೃತ್ತಿ ಹೊಂದಿದ್ದೆ. ಅಂದಿನ ದಿನಗಳಲ್ಲಿ ಕವನ, ನಾಟಕ, ಕಾದಂಬರಿ, ಕಥೆ, ರೇಡಿಯೋ ನಾಟಕ ಬರೆಯುತ್ತಿದ್ದ ನನ್ನನ್ನು ಶ್ರೀ ಅನಿಲ್ ಕುಮಾರ್ ಅವರು ದೂರದರ್ಶನಕ್ಕೆ ಪರಿಚಯಿಸಿದರು. ಪುಟ್ಟಣ್ಣ ಕಣಗಾಲರ ಬಿಳಿಹೆಂಡ್ತಿ ನಾಯಕ ನಟರಾದ ಶ್ರೀ ಅನಿಲ್‌ಕುಮಾರ್ ಅವರು ನನ್ನ ಮಾಧ್ಯಮ ಗುರುಗಳೆಂಬುದನ್ನು ಇಲ್ಲಿ ಸ್ಮರಿಸಲೇಬೇಕು. 1985 ರಲ್ಲಿ ಒಂದು ಸಾಕ್ಷಚಿತ್ರಕ್ಕೆ ನಿರೂಪಣಾ ಸಾಹಿತ್ಯ ಬರೆಯುವ ಮೂಲಕ ದೂರದರ್ಶನ ಪ್ರವೇಶಿಸಿದೆ. ಮುಂದೆ 1986, 1987 ರಲ್ಲಿ ನನ್ನ ಹಲವು ನಾಟಕಗಳು ಪ್ರಸಾರವಾದವು. ಇವುಗಳನ್ನು ಗುರುಗಳಾದ ಅನಿಲ್‌ಕುಮಾರ್ ಅವರೇ ನಿರ್ದೇಶಿಸಿದ್ದರು. ಮುಂದೆ ಅವರಿಂದಾಗಿಯೇ ನನಗೆ ನಿರ್ದೇಶಕರಾದ ಶ್ರೀ ಗುರುದತ್ತ (ಅಂದು ಅವರು ಸಂಕಲನಕಾರರಾಗಿದ್ದರು) ಹಾಗೂ ನಿರ್ಮಾಪಕರಾದ ಶ್ರೀ ಶಾಮ್‌ಸುಂದರ್ ಅವರ ಪರಿಚಯವಾಯಿತು. ಮುಂದೆ ನಿರ್ಮಾಣವಾಗಿದ್ದು ಹೊಸ ಇತಿಹಾಸ!

ಕನ್ನಡ ಕಿರುತೆರೆಯಲ್ಲಿ ಪ್ರಾತಃಸ್ಮರಣೀಯರ ಸಾಲಿನಲ್ಲಿ ಚಿತ್ರರಂಗದ ಅಮ್ಮ ಶ್ರೀಮತಿ ಪಂಡರಿಬಾಯಿ ಅವರ ತಂಗಿ, ಖ್ಯಾತ ನಟಿ ಶ್ರೀಮತಿ ಮೈನಾವತಿ ಅವರ ಮಕ್ಕಳಾದ ಗುರುದತ್ತ ಮತ್ತು ಶಾಮ್‌ಸುಂದರ್ ಪ್ರಮುಖರಾಗುತ್ತಾರೆ ಎಂದರೆ ಅತ್ಯುಕ್ತಿಯಲ್ಲ. ‘ಯಂತ್ರ ಮಿಡಿಯಾ ಹಾಗೂ ಯಂತ್ರ ಸಾಫ್ಟ್ವೇರ್’ ಸಂಸ್ಥೆಗಳ ಮೂಲಕ 1988 ರಿಂದ ಅವರು ಕಿರುತೆರೆ ಧಾರಾವಾಹಿ ಕ್ಷೇತ್ರದಲ್ಲಿ ತೊಡಗಿಕೊಂಡ ಪರಿ ಅಚ್ಛರಿಯನ್ನು ಉಂಟುಮಾಡುತ್ತದೆ. ಮುರೆಯಲಾಗದ ಹಲವು ದಾಖಲೆಗಳನ್ನು ನಿರ್ಮಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಇವರೊಟ್ಟಿಗೆ ಕಿರುತೆರೆಯಲ್ಲಿ (1989) ಧಾರಾವಾಹಿ ಬರವಣಿಗೆ ಆರಂಭಿಸಿದೆ. ‘ಅಮ್ಮ, ಸತ್ಯಾನ್ವೇಷಣೆ, ಸ್ವೀಕಾರ, ರಂಗೋಲಿ, ತುಮುಲ, ಮಕ್ಕಳಿಗಾಗಿ’ ಮುಂತಾದ ಹಲವು ವಾರದ ಧಾರಾವಾಹಿ ಬರೆದೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಗುರುದತ್ತ-ಶಾಮ್‌ಸುಂದರ್ ಇವರಿಗೆ ನಾನೆಂದೆಂದೂ ಕೃತಜ್ಞ. ‘ಅಮ್ಮ’ ಧಾರಾವಾಹಿ ಪ್ರಸಾರವಾಗುತ್ತಿದ್ದ ಸಮಯದಲ್ಲೇ ಅಪ್ಪು ವಿಡಿಯೋ ನಿರ್ಮಾಣದಲ್ಲಿ ನನ್ನ ಬರಹದ ‘ತಾಳೋ ನೋಡೋಣ’ ಧಾರಾವಾಹಿಯೂ ಪ್ರಸಾರವಾಗುತ್ತಿತ್ತು. ಈ ಎರಡೂ ಧಾರಾವಾಹಿ ಕೆಲವು ದಾಖಲೆಗಳಿಗೆ ಕಾರಣವಾಯಿತು!.

ಮುಂದೆ 1988ರಲ್ಲಿ ‘ಮನೆತನ’ ಮೆಗಾ ಧಾರಾವಾಹಿ. ಕನ್ನಡ ಕಿರುತೆರೆ ಇತಿಹಾಸದ ಪುಟಗಳಲ್ಲಿ ಅಳಿಸಲಾಗದ ದಾಖಲೆ ಉಳಿಸಿದ ಮೂಲ ಕನ್ನಡ ಕಥೆಯ ಪ್ರಪ್ರಥಮ ಮೆಗಾ ಧಾರಾವಾಹಿ. ಇದರ ನಿರ್ದೇಕರು ಗುರುದತ್ತ, ನಿರ್ಮಾಪಕರು ಶಾಮ್‌ಸುಂದರ್. ಇದಕ್ಕೆ ಚಿತ್ರಕಥೆ-ಸಂಭಾಷಣೆ ಬರೆಯುವ ಭಾಗ್ಯ ನನಗೆ ದೊರಕಿತು. ದೂರದರ್ಶನದಲ್ಲಿ ಅಪೂರ್ಣವಾದ ಈ ಮೆಗಾಧಾರಾವಾಹಿ ಕಾವೇರಿ ಛಾನಲ್ ನಲ್ಲಿ ‘ಹೊಸ ಮನೆತನ’ ಹೆಸರಿನಲ್ಲಿ ಪೂರ್ಣಗೊಂಡಿತು. ಮುಂದೆ ‘ಮಹಾಯಜ್ಞ’ ಒಂದು ಗಂಟೆಯ! ಮೆಗಾಧಾರಾವಾಹಿ. ಆ ಕಾಲಕ್ಕೇ ಬಹು ಕೋಟಿಯಲ್ಲಿ ಅತ್ಯಂತ ಶ್ರೀಮಂತವಾಗಿ ನಿರ್ಮಾಣವಾದ ಕೃತಿಗಳು!. ಈ ಎರಡು ಧಾರಾವಾಹಿಗಳಲ್ಲೂ ಖ್ಯಾತರಾದ ಹಿರಿಯ ಚಲನಚಿತ್ರ ನಟರ ಸಮಾಗಮವೇ ಇತ್ತು! ತಂತ್ರಜ್ಞರ ದೊಡ್ಡ ಪಡೆ ಇತ್ತು! ಈ ಬಗ್ಗೆ ಬರೆಯಲು ಹೋದರೆ ಹತ್ತಿಪ್ಪತ್ತು ಪುಟಗಳೇ ಬೇಕಾಗಬಹುದು!

2000ನೇ ಇಸವಿ ಹೊತ್ತಿಗೆ ಬಾಲಾಜಿ ಟೆಲಿಫಿಲ್ಮ್ ಕನ್ನಡ ಕಿರುತೆರೆ ಪ್ರವೇಶಿಸಿತ್ತು. ಕನ್ಯಾದಾನ, ಕುಂಕುಮಭಾಗ್ಯ, ಕವಲುದಾರಿ, ಕಂಕಣ, ಕಾವ್ಯಾಂಜಲಿಯ ಆರಂಭಿಕ ಕಂತುಗಳು ಹೀಗೆ ಇವರ ನಿರ್ಮಾಣದ ಹೆಚ್ಚಿನ ಮೆಗಾ ಧಾರಾವಾಹಿಗಳನ್ನು ಬರೆಯುವ ಅವಕಾಶವೂ ನನ್ನ ಪಾಲಿಗೆ ಬಂತು. ಕುಂಕುಮಭಾಗ್ಯ ಒಂದು ದಾಖಲೆಯನ್ನು ನಿರ್ಮಿಸಿತು! ಮುಂದೆ ಬರೆದ ಬೇರೆ ಬೇರೆ ಬ್ಯಾನರ್‌ನ ಸಾಲು ಸಾಲು ಧಾರಾವಾಹಿಗಳು ಸ್ಮರಣೀಯವಾಗಿದೆ. 2018ರವರೆಗೂ ಈ ಕ್ಷೇತ್ರದಲ್ಲಿ ಬೇರೆ ಬೇರೆ ನಿರ್ಮಾಪಕರು, ನಿರ್ದೇಶಕರು, ನಿರ್ಮಾಣ ಸಂಸ್ಥೆಗಳೊಂದಿಗೆ ಬಿಡುವಿಲ್ಲದಂತೆ ತೊಡಗಿಕೊಂಡು ಬದುಕು ಕಟ್ಟಿಕೊಂಡ ಸಂತಸ, ತೃಪ್ತಿ ನನ್ನದು.

2010ರಲ್ಲಿ ‘ಗುರು ರಾಘವೇಂದ್ರವೈಭವ’ ಮೆಗಾ ಧಾರಾವಾಹಿ ಕನ್ನಡ ಕಿರುತೆರೆಯ ಪೌರಾಣಿಕ-ಐತಿಹಾಸಿಕ ಧಾರಾವಾಹಿಗೆ ಮೌಲಿಕ ಶ್ರೇಣಿಯನ್ನು ಇನ್ನೊಂದು ಹಂತಕ್ಕೆ ಏರಿಸಿದ್ದು ಯಾರೂ ಮರೆಯುವಂತಿಲ್ಲ. ಇದು ನಾನು ಬರೆದು ನಿರ್ದೇಶಿಸಿದ ಧಾರಾವಾಹಿ ಎಂಬ ಹೆಗ್ಗಳಿಕೆಯಲ್ಲಿ ಹೇಳುತ್ತಿರುವುದಲ್ಲ. ನೆನಪಿರಲಿ! ಸತ್ಯ ಬಹುಕಾಲ ಉಳಿಯುವಂತಹದು. ಎಂ.ಎಸ್.ರಾಮಯ್ಯ ಮೀಡಿಯಾ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ಶ್ರೀಮತಿ ಅನಿತಾ ಪಟ್ಟಾಭಿರಾಮ್, ಡಾ.ಪಟ್ಟಾಭಿರಾಮ್ ಅವರು ಇದನ್ನು ನಿರ್ಮಿಸಿದರು. ಬೇರೆ ಯಾರೇ ನಿರ್ಮಾಪಕರಾಗಿದ್ದರೂ ಈ ಧಾರಾವಾಹಿ ನಿರ್ಮಾಣ ಕಷ್ಟವಿತ್ತು! ನನ್ನ ಪರಿಕಲ್ಪನೆಗೆ ತಕ್ಕಂತೆ, ಕೋಟ್ಯಾಂತರ ರೂಪಾಯಿಗಳ ಸೆಟ್, ಅದ್ದೂರಿ ನಿರ್ಮಾಣ, ಸಾವಿರಾರು ಕಲಾವಿದರು, ತಂತ್ರಜ್ಞರು, ವಾರದ ಏಳೂ ದಿನ ಪ್ರಸಾರ, ಐದುನೂರಾ ಅರವತ್ತೈದು ಕಂತು, 29 ದೇಶದಲ್ಲಿ ಧಾರಾವಾಹಿ ವೀಕ್ಷಿಸಿದ ಭಕ್ತರು, ಎರಡು ವರ್ಷ ಭಕ್ತಿಶ್ರದ್ಧೆಯ ಪರಾಕಾಷ್ಠೆಯಲ್ಲಿ ನೋಡಿದ ವೀಕ್ಷಕರು, ಎತ್ತರಕ್ಕೇರಿದ ಛಾನಲ್‌ನ ಗೌರವ, ಹೆಸರು ಹಣ ಎರಡನ್ನೂ ಕಂಡ ನಿರ್ಮಾಪಕರು. ಬದುಕಿನಲ್ಲಿ ಭಾಗ್ಯ ಒದಗಿ ಬರುವುದು ಹೀಗಿರಬೇಕು! ಯಾವುದೂ ನಾವು ಮಾಡುವುದಲ್ಲ! ಆಗುವುದು. ಆದ ಮೇಲೆ ನಾನೇ ಮಾಡಿದ್ದು, ಸಾಧಿಸಿದೆನೆಂದು ಬೆನ್ನು ಚಪ್ಪರಿಸಿಕೊಳ್ಳುವುದು! ಈ ಆನಂದವೂ ಒಂದರಗಳಿಗೆಯ, ‘ಕಲಿ’ ಹೆಮ್ಮೆಯಲ್ಲವೇ!

ಇಂತಿಪ್ಪ ದಿನಗಳು ಕಳೆದ ಮೇಲೆ 2018 ರಲ್ಲಿ ಉದಯ ಟಿ.ವಿ.ಯಲ್ಲಿ ಪ್ರಸಾರವಾದ ‘ಜೈ ಹನುಮಾನ್’ ಮೆಗಾಧಾರಾವಾಹಿಗೆ ನನ್ನ ಧಾರಾವಾಹಿ ಬರವಣಿಗೆ ನಿಂತಿತು. ಅಂದರೆ ಅಲ್ಲಿಗೆ ಕ್ಷಣಿಕ, ನಿಂತಿತು ಅಷ್ಟೇ. ಮುಂದೆ… ವರ್ಷದಲ್ಲೇ ‘ರಚನೆ-ನಿರ್ದೇಶನ’ ಶೀರ್ಷಿಕೆಯಲ್ಲಿ ಮಹೋನ್ನತ ದೈವೀ-ಕೃತಿ ಮೂಡಿಬರಲೂ ಸಾಕು! ಸಾಧನೆ ಕ್ಷಣಿಕ! ಬದುಕು ವಿಸ್ಮಯ. ಈ ಲೇಖನದಲ್ಲಿನ ಆಶ್ಚರ್ಯ ಸೂಚಕ ಚಿಹ್ನೆ(!)ಗೆ ಮುಂದಿನ ದಿನಗಳಲ್ಲಿ ಕಾಲಾವಕಾಶ, ದೇಹಾವಕಾಶ! ಸ್ಥಳಾವಕಾಶದ ಆಧಾರದ ಮೇಲೆ ಉತ್ತರಿಸುತ್ತೇನೆ.

‘ಮತ್ತೊಮ್ಮೆ ಹೌದು..’ ಬಿಟ್ಟರೂ ಬಿಡದೀ ‘ಪೆಟ್ಟಿಗೆಯ ಮಾಯೆ’! “ಆಯಾಚಿತಃ ಸುಖಂ ದತ್ತೇ ಯಾಚಿತಶ್ಚನ ಯಚ್ಛತಿ/ ಸರ್ವಸ್ವಂ ಚಾಪಿ ಹರತೇ ವಿಧಿರುಚ್ಛೃಂಖಲೋ ನೃಣಾಮ್” (ಬೇಡದಿದ್ದಾಗ ವಿಧಿಯು ಸುಖವನ್ನು ಕೊಡುತ್ತಾನೆ; ಬೇಡಿದಾಗ ಕೊಡುವುದಿಲ್ಲ; ಅಷ್ಟೇ ಅಲ್ಲ! ಜನರ! ಅಂದರೆ ನಿನ್ನ ಸರ್ವಸ್ವವನ್ನೂ ಅಪಹರಿಸಿಬಿಡುತ್ತಾನೆ. ವಿಧಿಯು ಯಾವ ನಿಯಮಕ್ಕೂ ಒಳಪಡದ ಸ್ವೇಚ್ಛಾಚಾರಿ!).

ಅಂದಿನ ಭ್ರಮಾಲೋಕದಿಂದ ಇಂದಿಗೆ ಬಂದಾಗ ಅದೆಷ್ಟು ಅಚ್ಚರಿಗಳಿದೆ! ಈ ನೆಲದ ಕಥೆಯ, (ಮನೆತನ) ಚಿತ್ರಕಥೆ ಸಂಭಾಷಣೆ ರೂಪಿಸುತ್ತಿದ್ದಾಗ (ಹುಲಿಮನೆ-ಹೊಸಮನೆ) ರೀಮೇಕ್ ನನ್ನ ಪ್ರತಿಸ್ಪರ್ಧಿಯಾಗಿತ್ತು. ನಾನು ಮೂಲಕೃತಿ ನೀಡಿ ಯಶಸ್ಸು ಸಾಧಿಸಿದ ಮೇಲೆಯೂ, ರೀಮೇಕ್ ಬರೆಯಬೇಕಾಯಿತು! ‘ಹೊಟ್ಟೆಪಾಡು!’. ಅಂದು ನನ್ನ ಕಾಪಾಡಿದ್ದು ಬಾಲಾಜಿ ಟೆಲಿಫಿಲ್ಮ್ಸ್! ಮುಂದೆ 2007-08 ರಲ್ಲಿ ಖಾಸಗಿ ಛಾನಲ್ ಸೇರಿದ್ದಾಯಿತು, ಒಂದೂವರೆ ವರ್ಷಕ್ಕೆ ಬಿಟ್ಟಿದ್ದೂ ಆಯಿತು. ಮುಂದೇನೆಂದು ಚಿಂತಿಸುತ್ತಿದ್ದ ಸಮಯದಲ್ಲಿ, ‘ಗುರು ರಾಘವೇಂದ್ರ ವೈಭವ’ ಮೆಗಾ ಧಾರಾವಾಹಿ ಬರೆದು ನಿರ್ದೇಶಿಸುವ ಅವಕಾಶ ದೊರೆತಿದ್ದು ಸೌಭಾಗ್ಯ.ಇದೇ ಅಲ್ಲವೇ? ‘ಆಯಾಚಿತಃ ಸುಖಂ ದತ್ತೇ…’.

ಆರಂಭದ, ಅಂದಿನ ದಿನಗಳಲ್ಲಿ ಕಿರುತೆರೆಗೆ ಸಂಘಶಕ್ತಿ ಇರಲಿಲ್ಲ. ಒಂದೊಂದಾಗಿ ಕನ್ನಡ ಛಾನಲ್‌ಗಳು ಬರುತ್ತಿರುವಂತೆ, ಮೆಗಾಧಾರಾವಾಹಿಗಳ ಸಂಖ್ಯೆ ಹೆಚ್ಚುತ್ತಿರುವಂತೆ, ಕಿರುತೆರೆ, ಹಿರಿತೆರೆಗೆ ಕಮ್ಮಿ ಇಲ್ಲದಂತೆ ಬೆಳೆಯ ತೊಡಗಿತು. ಇದರೊಂದಿಗೆ ಹಲವು ಸಮಸ್ಯೆಗಳು ಎದುರಾದವು. ಆಗ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ನಿರ್ದೇಶಕರು ಒಂದಾಗಿ, ಕಿರುತೆರೆಗೊಂದು ಪ್ರಾತಿನಿಧಿಕ ಸಂಸ್ಥೆಯ ಅಗತ್ಯತೆಯ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬಂದರು. ಆಗ ಹುಟ್ಟಿಕೊಂಡಿದ್ದು ಕೆಟಿವಿ (ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್). ಕುಟುಂಬದ ಕಷ್ಟಸುಖ ಕೇಳಿ, ಒಳಿತು ಮಾಡಲು ಮನೆಯಲ್ಲೊಬ್ಬ ತಿಳುವಳಿಕೆ ಇರುವ ಯಜಮಾನನಿರಬೇಕು. ಹಾಗೇ ಒಂದು ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಸರ್ವತೋಮುಖ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಳ್ಳುವ ಸಂಘಶಕ್ತಿ ಬೇಕು. ಶ್ರಮವಹಿಸಿ ಕಾರ್ಯನಿರ್ವಹಿಸುವ ಪದಾಧಿಕಾರಿಗಳು ಇರಬೇಕು. ಜೊತೆಗೊಂದು ಮುಖವಾಣಿ ಇದ್ದರೆ ಇನ್ನಷ್ಟು ಚೆಂದ. ನಮಗೆ ಕೆಟಿವಿ ಸಂಘಶಕ್ತಿ ಇದೆ. ‘ಟೀವಿ ಠೀವಿ’ ಪತ್ರಿಕೆಯೂ ಇದೆ.

ಪತ್ರಿಕೆ ಕೆಲವು ವರ್ಷ ನಿಂತಿತ್ತು.ಈಗ ಅನುಭವಿ ಸಂಪಾದಕರ ನೇತ್ರತ್ವದಲ್ಲಿ ಪುನಃ ಆರಂಭವಾಗಿರುವುದು ಚಲನಶೀಲತೆಗೆ ಸಾಕ್ಷಿ. ಉತ್ಸಾಹಿ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಸದಸ್ಯರಿಂದ ಹುರುಪುಗೊಂಡ ಸಂಘ ಈಗ ಹೊಸ ರೂಪದಲ್ಲಿ ಮೈಕೊಡವಿ ಮುನ್ನಡೆವ ಲಕ್ಷಣ ತೋರುತ್ತಿದೆ. ಎಲ್ಲರಿಗೂ ‘ಗುಡ್‌ಲಕ್’.

ಕಿರುತೆರೆಯ ಮೆಗಾಧಾರಾವಾಹಿಯಲ್ಲಿ ಕನ್ನಡ ಕಥೆಗೆ ಓಂಕಾರ ಹಾಕಿದ ‘ಅಂದಿನ ದಿನಗಳ ಸ್ಮರಿಸಿ’ ಈ ಮುನ್ನಾ ದಿನಗಳನ್ನು ವೀಕ್ಷಿಸಿದಾಗ ನಾನು ವಿಸ್ಮಯಗೊಂಡಿದ್ದು / ಗೊಳ್ಳುತ್ತಿರುವುದು ನಿಜ. ಅಂದು ಒಂದು ಕನ್ನಡ ಕಥೆಯ ಮೆಗಾಧಾರಾವಾಹಿ. ಆ ನಂತರ ಅದೆಷ್ಟು ಮೆಗಾ ಧಾರಾವಾಹಿ ಬಂದು ಹೋದವು! ‘ಮನೆತನ’ ಮೆಗಾಧಾರಾವಾಹಿ ಬರೆದಾಗ ನನಗೆ ಕನ್ನಡದಲ್ಲಿ ಮಾದರಿ ಇರಲಿಲ್ಲ! ನನ್ನದೇ ದಾರಿಯಲ್ಲಿ ನಡೆದೆ..ನಿರ್ಮಾಪಕ-ನಿರ್ದೇಶಕರು, ಕಲಾವಿದರು ತಂತ್ರಜ್ಞರು ಬೆನ್ನಿಗೆ ನಿಂತರು. ನಂಬಿದ ಭಗವಂತ ಯಶ ನೀಡಿದ. ಇಂದು ಐವತ್ತು-ಅರವತ್ತು ಮೆಗಾಧಾರಾವಾಹಿಗಳು ಪ್ರಸಾರವಾಗುತ್ತಿದೆ. ಎಲ್ಲವನ್ನೂ ನಾನು ಬೆರಗುಗಣ್ಣುಗಳಿಂದ ನೋಡುತ್ತಿದ್ದೇನೆ. ಮನೆತನದ ಹೊತ್ತಿಗೆ ಇದ್ದಿದು ಎರಡು ಛಾನಲ್. ಇಂದು ಅದೆಷ್ಟು ಛಾನಲ್! ಎಷ್ಟು ವಿಭಿನ್ನ (ಸ್ವಮೇಕ್/ರಿಮೇಕ್) ಕಥೆಗಳು! ಸನ್ನಿವೇಶಗಳು, ಕುತೂಹಲ ಕೆರಳಿಸುವ ಚಿತ್ರಕಥೆ, ಅದಕ್ಕೆ ಪೂರಕವಾದ ಸಂಭಾಷಣೆ, ಒಳ್ಳೊಳ್ಳೇ ನಿರ್ದೇಶಕರು, ನಿರ್ಮಾಪಕರು, ಚಿತ್ರಕಥೆಗಾರರು, ಸಂಭಾಷಣೆಗಾರರು, ತಂತ್ರಜ್ಞರು.ತುಂಬಾ ತುಂಬಾ ಸಂತೋಷವಾಗುತ್ತದೆ. ಈ ಸ್ಪರ್ಧಾ ಜಗತ್ತಿನಲ್ಲೂ ಇವರೆಲ್ಲಾ ಯಶಸ್ಸಿನಲ್ಲಿ ತೇಲುತ್ತಿದ್ದಾರಲ್ಲಾ! ಇದು ಅವರವರ ಸಾಧನೆ. ಕಿರುತೆರೆಯ ಮಹಿಮೆ!

ಅಂದಿನ ನಮ್ಮಂತರಂಗದ ಕಷ್ಟನಷ್ಟ, ಭಾವಭ್ರಮೆಗಳು ನಮ್ಮೊಳಗಿನ ಆಕರಗಳು!. ಬೆಳೆದು ಬಸಿಯುವ! ಹಸಿರು, ಉಸಿರು ಅಂತರಾತ್ಮಗಳು!. ಹೌದು..’ಬಿಟ್ಟರೂ ಬಿಡದೀ ಮಾಯೆ’ ಕಿರುತೆರೆ.

ShareShareSendShareTweetSend

Leave a Reply Cancel reply

Your email address will not be published. Required fields are marked *

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್

ಕನ್ನಡ ದೂರದರ್ಶನ ಉದ್ಯಮದಲ್ಲಿ ಕಲಾವಿದರು ಮತ್ತು ತಂತ್ರಜ್ಞರ ಕಲ್ಯಾಣವನ್ನು ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಸ್ತಿತ್ವಕ್ಕೆ ಬಂದಿದೆ.

ಕ್ವಿಕ್ ಲಿಂಕ್ಸ್

  • ನಮ್ಮ ಕುರಿತು
  • ಯೋಜನೆಗಳು
  • ಕಾರ್ಯಕ್ರಮಗಳು
  • ಲೇಖನಗಳು
  • ಸುದ್ಧಿಗಳು
  • ಸಂಪರ್ಕಿಸಿ

ಫಾಲೋ ಅಸ್

ಡೌನ್‌ಲೋಡ್ ಆಂಡ್ರಾಯ್ಡ್ ಅಪ್ಲಿಕೇಶನ್‌

  • ನಮ್ಮ ಕುರಿತು
  • ಸಂಪರ್ಕಿಸಿ
  • ಪ್ರೈವಸಿ ಪಾಲಿಸಿ

© 2022 - 2023, Karnataka Television Association All Rights Reserved. Design and Developed by: Ekaashara Infotech

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಹೋಂ
  • ನಮ್ಮ ಕುರಿತು
    • ನಮ್ಮ ಪದಾಧಿಕಾರಿಗಳು
  • ಕಾರ್ಯಕ್ರಮಗಳು
  • ಯೋಜನೆಗಳು
  • ಲೇಖನಗಳು
  • ಸುದ್ಧಿಗಳು
  • ಮ್ಯಾಗಝಿನ್
  • ಗ್ಯಾಲರಿ
    • ಫೋಟೋಗಳು
    • ವೀಡಿಯೊಗಳು
  • ಸಂಪರ್ಕಿಸಿ

© 2022 - 2023, Karnataka Television Association All Rights Reserved. Design and Developed by: Ekaashara Infotech