ಅದು ಸರಿ ಸುಮಾರು 85ರ ಸಮಯಗಳು ಇರಬಹುದು…… ಆಗಷ್ಟೇ ಗರಿಗದರಿ ನಿಂತಿತ್ತು ದೂರದರ್ಶನ. ನಮ್ಮೆಲ್ಲರ ಮನೆಯಂಗಳದ ವಿಶೇಷ ಅತಿಥಿ ಆ ಟಿವಿ. ಅಲ್ಲಿ ಬರುತ್ತಿದ್ದ ಒಂದಷ್ಟೇ ಕಾರ್ಯಕ್ರಮಗಳು, ಕಪ್ಪು ಬಿಳುಪು ಚಿತ್ರಗಳು, ಪುಟ್ಟ ಪರದೆಯ ಮುಂದೆ ಅಲುಗಾಡದಂತೆ ಕೂರಿಸಿಬಿಡುತ್ತಿತ್ತು…
ನನಗಿನ್ನೂ ಚೆನ್ನಾಗಿ ನೆನಪುಗಳು ಇದ್ದಾವೆ. 83ರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿತ್ತು. ಭಾರತ ವೆಸ್ಟ್ ಇಂಡೀಸ್ ಫೈನಲ್ ಪಂದ್ಯವನ್ನ ಆಡುತ್ತಿದ್ದ ಕಾಲ. ಮತ್ತೆ ರಸ್ತೆ ಎಲ್ಲ ಹುಡುಕಿದರೂ ಒಂದು ಎರಡು ಟಿವಿ. ನಾವು ಕೂಡ ಸ್ಥಿತಿವಂತರಲ್ಲದ….ಕಾಲ.
ಸ್ಥಿತಿವಂತರ ಮನೆಗೋಗಿ ನೆಲದ ಮೇಲೆ ಕುಳಿತು ಆ ಒಂದು ಸಣ್ಣ ಪರದೆಯಲ್ಲೇ ದೊಡ್ಡದೊಂದು ಪಂದ್ಯವನ್ನ ನೋಡಿ ಭಾರತ ಪ್ರಥಮ ಬಾರಿಗೆ ವಿಶ್ವಕಪ್ ಗೆದ್ದ ಸಂದರ್ಭವನ್ನು ನೋಡಿದ ಸುಘಳಿಗೆ ಇನ್ನೂ ಮಾಸದಂತೆ ನೆನಪಿನಲ್ಲಿ ಉಳಿದಿದೆ. ಭಾರತ ಗೆದ್ದಿತ್ತು. ಅದೇ ದೂರದರ್ಶನದ ಸುದ್ದಿವಾಹಿನಿಯಲ್ಲಿ “ವೆಸ್ಟ್ ಇಂಡೀಸ್ನ ಭದ್ರಕೋಟೆ ಛಿದ್ರ ಛಿದ್ರ : ಭಾರತಕ್ಕೆ ಪ್ರತಿಷ್ಠಿತ ವಿಶ್ವಕಪ್” ಎಂಬ ಶೀರ್ಷಿಕೆ ಪುಟ್ಟಪರದೆಯ ಮೇಲೆ ಬಂದದ್ದು ಸರಿ ಸುಮಾರು 110 ಕೋಟಿ ಭಾರತೀಯರ ಎದೆ ಝಲ್ ಎನಿಸಿದ್ದು, ಅದನ್ನು ತೋರಿಸಿದ್ದು ಆ ಪುಟ್ಟ ಪರದೆ ಎಂದು ಹೆಸರಿಸಿಕೊಳ್ಳುವ ದೂರದರ್ಶನ.
ನನಗೊಂದು ಖುಷಿ, ನಮ್ಮ ಮನೆಗೆ ಆ ಪುಟ್ಟ ಪರದೆ ಬಂದದ್ದು 87ರಲ್ಲಿ. ಆಗ ಸಣ್ಣ ಸಣ್ಣ ಕಾರ್ಯಕ್ರಮಗಳೇ ನಮ್ಮೆಲ್ಲ ನೋಡುಗರ ಮನೋರಂಜನೆಯ ಮಹಾನ್ ಕೇಂದ್ರಬಿಂದು. ಹಾಗಾಗಿಯೇ ಎಂದೂ ಯಾರೂ ಮರೆಯಲಾಗದ ಮಹಾನ್ ಮಾಣಿಕ್ಯ ಇಂದೇನಾದರೂ ಇದ್ದರೆ ಅದು ದೂರದರ್ಶನ ಮತ್ತು ಪುಟ್ಟಪರದೆ. ಹಾಗಾಗಿ ನಾನು ಪುಟ್ಟಪರದೆಗೊಂದು ವಿನಮ್ರತೆಯ ನಮನಗಳನ್ನ ಸದಾಕಾಲ ಹೇಳುತ್ತೇನೆ. ಅಂದಿನಿನಿಂದಲೇ ಎಷ್ಟೋ ಪ್ರೇಕ್ಷಕರ ಮನಗೆದ್ದ ಮಹಾನ್ ಮನೋರಂಜನೆಯ ಕೇಂದ್ರಬಿಂದು. ಅಂತೆಯೇ ಆ ಮನರಂಜನೆಯ ಕೇಂದ್ರದಲ್ಲಿ ತಂತ್ರಜ್ಞರು ಕಲಾವಿದರು ಹೀಗೆ ನಾನಾ ಪ್ರಕಾರಗಳಲ್ಲಿ ಕಾರ್ಯನಿರ್ವಹಿಸುತ್ತಾ ಹೊಟ್ಟೆ ತುಂಬಿಸಿಕೊಂಡವರು ಅದೆಷ್ಟೋ ಜನ, ಅಲ್ಲೊಬ್ಬ ನಾನು ಕೂಡ..

ನನ್ನಂತೆ ಅದೆಷ್ಟೋ ಜನ ಅಲ್ಲಿಂದಲೇ ಕನಸು ಕಾಣುತ್ತಾ ದೊಡ್ಡ ಮಟ್ಟಕ್ಕೆ ಜಿಗಿದವರು. ಹಾಗೆ ಕನಸು ಕಂಡ ಈ ರಂಗಕ್ಕೆ ಧುಮುಕಿದ ಅದೆಷ್ಟೋ ಮಹನೀಯರು ಇಂದು ಸಾಧಕರು. ಬಹಳಷ್ಟು ಜನ ನಿರ್ದೇಶಕರು, ಮಹಾನ್ ನಿರ್ಮಾಪಕರು ಹಿರಿಯ ಕಲಾವಿದರು ತಂತಜ್ಞರು ಎಲ್ಲರಿಗೂ ಆಸರೆಯ ತಾಣ ದೂರದರ್ಶನ. ನನಗಂತೂ ಅಚ್ಚುಮೆಚ್ಚು. ಆ ಕಾರಣದಿಂದಲೇ ನಾವು ಅಲ್ಲಿನ ಆಸುಪಾಸಲಿಂದಲೇ ಬೆಳೆದಿದ್ದು. ಅಂದು ಸಣ್ಣ ಸಣ್ಣ ಮೇಕಪ್ಗಳಿಗೆ ಕರೆದೊಯ್ಯುತ್ತಿದ್ದ ಮೇಕಪ್ ನಾಣಿ ಮಾಮ ಒಂದಷ್ಟು ನಾಟಕದ ಮೇಕಪ್ ನೋಡಿಕೊಳ್ಳುವಂತೆ ನಮಗೆ ಹೇಳುತ್ತಿದ್ದದ್ದು ಇಂದು ನಮ್ಮೆಲ್ಲರ ಹೊಟ್ಟೆಪಾಡು. ಅಂದು ಬರುತ್ತಿದ್ದ 13 ಕಂತುಗಳ ಧಾರಾವಾಹಿ ಎಲ್ಲರ ಮನೆ ಮತ್ತು ಮನದಂಗಳದ ಮನರಂಜನೆ. ಅದರಲ್ಲಿಯೂ ‘ಕನ್ನಡಿಯೊಳಗಿನ ಗಂಟು’ ಕನ್ನಡ ಚಿತ್ರರಂಗದ ಅದೆಷ್ಟೋ ಹಿರಿಯ ಕಲಾವಿದರೆಲ್ಲ ಸೇರಿ ಮಾಡಿದ ಧಾರಾವಾಹಿ. ಇನ್ನುಳಿದಂತೆ ಎಂಬತ್ತರ ದಶಕದ ನಮ್ಮೆಲ್ಲರ ಅಚ್ಚು ಮೆಚ್ಚಿನ ನಮ್ಮೆಲ್ಲರ ಮನೆಯ ಅತಿಥಿ ವಾರಕ್ಕೊಮ್ಮೆ ಬರುತ್ತಿದ್ದ ಸಿನಿಮಾಗಳು. ನಮಗೆ ಅದೊಂದು ಪುಳಕ. ಮುದ. ಹಬ್ಬ. ಟೀವಿ ಇದ್ದ ಮನೆಗಳ ಮುಂದೆ ದೊಡ್ಡ ಸಂತೆ.
ಆ ಸಾವಿರಾರು ಪುಳಕದ ಕ್ಷಣಗಳನ್ನು ನೆನಯುತ್ತಲೇ ನಾನು ಹೇಳುತ್ತೇನೆ. ಇಂದು ಇಷ್ಟೆಲ್ಲ ವಾಹಿನಿಗಳು ಬಂದರೂ ಕೂಡ ದೂರದರ್ಶನ ನಮ್ಮೆಲ್ಲರ ಪಾಲಿನ ಅತ್ಯುತ್ತಮ ಸರ್ವೋತ್ತಮ.
