“ನಾನು ಅಪ್ಪಟ ಕನ್ನಡದ ಹುಡುಗಿ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವಳು. ಈಗಲೂ ಕನ್ನಡವೇ ನನ್ನ ಉಸಿರು. ಬೆಂಗಳೂರೇ ನನ್ನ ಮನೆ. ಆದರೆ ತೆಲುಗು ಚಿತ್ರರಂಗ ಕರೆದು ಗೌರವಿಸಿದೆ. ಭೋಜಪುರಿ ಚಿತ್ರರಂಗ ಹೊತ್ತು ಮೆರೆಸುತ್ತಿದೆ. ಹೀಗಾಗಿ ಎಲ್ಲ ಚಿತ್ರರಂಗದ ಅಭಿಮಾನಿಗಳಿಗೂ ನಾನು ಸದಾ ಋಣಿ” ಎಂದು ನಗುತ್ತಾ ಲಂಡನ್‌ನಲ್ಲಿ ಚಿತ್ರಿಕರಣದ ನಡುವೆ ಫೋನ್ ಮಾಡಿ ಹೇಳಿದ್ದು ನಟಿ ಮೇಘಶ್ರೀ.
ಮೇಘಶ್ರೀ ಎಂದರೆ ತಕ್ಷಣ ನೆನಪಾಗದಿದ್ದರೂ ಕನ್ನಡದ ‘ನಾಗಕನ್ನಿಕೆ’ ಧಾರಾವಾಹಿಯಲ್ಲಿ ನಟಿಸಿದಾಕೆ ಎಂದು ಹೇಳುತ್ತಿದ್ದ ಹಾಗೆಯೇ ಪಟ್ಟನೆ ಕಿರುತೆರೆ ವೀಕ್ಷಕರು ಗುರುತಿಸಬಲ್ಲರು. ಹಾಗೆ ಕಿರುತೆರೆಯಲ್ಲಿ ನಟಿಸುವ ಮುನ್ನ ಮೇಘಶ್ರೀ ಒಂದು ಸುತ್ತು ತೆಲುಗು ಚಿತ್ರರಂಗವನ್ನು ಸುತ್ತಿ ಬಂದಿದ್ದರು. ಕನ್ನಡದಲ್ಲಿಯು ಮೂರು ನಾಲ್ಕು ಚಿತ್ರಗಳಲ್ಲಿ ನಾಯಕಿಯಾಗಿ ಗಮನಾರ್ಹ ಪಾತ್ರಗಳಲ್ಲಿ ನಟಿಸಿದ್ದರು. ಅದೆಲ್ಲಕ್ಕಿಂತ ಹೆಚ್ಚಾಗಿ ಈಗ ಕಳೆದ ಎರಡು ವರ್ಷಗಳಲ್ಲಿ ಇದ್ದಕ್ಕಿದ್ದಂತೆಯೇ ಅವರಿಗೆ ಸ್ಟಾರ್ ತಿರುಗಿದೆ. ಭೋಜಪುರಿ ಚಿತ್ರಗಳಲ್ಲಿ ನಂಬರ್ ವನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಮೂರು ಚಿತ್ರಗಳು ಬಿಡುಗಡೆಯಾಗಿ ಸೂಪರ್ ಹಿಟ್ಟಾಗಿದೆ. ಈಗ ಇಡಿಯ ಭೋಜಪುರಿ ಚಿತ್ರರಂಗ, ನಾಯಕರು, ಕಥೆಗಾರರು ಏಕಕಾಲದಲ್ಲಿ ಮೇಘಶ್ರೀ ಹಿಂದೆ ಬಿದ್ದಿದ್ದಾರೆ. ಸಧ್ಯಕ್ಕೆ ಮೂರು ಚಿತ್ರಗಳ ಚಿತ್ರೀಕರಣ ಒಟ್ಟಿಗೇ ನಡೆಯುತ್ತಿದೆ. ಇನ್ನೂ ನಾಲ್ಕು ಚಿತ್ರಗಳು ಆಕೆಯ ಡೇಟ್‌ಗಾಗಿ ಶುರು ಮಾಡಲು ಕಾಯುತ್ತಾ ಇದೆ.
ಚಲನಚಿತ್ರ ಮತ್ತು ಕಿರುತೆರೆ ಮಾಧ್ಯಮದಲ್ಲಿ ಯಾವಾಗ ಏನು ಬೇಕಾದರೂ ಸಾಧ್ಯವಾಗಬಹುದು ಎಂಬುದಕ್ಕೆ ಸಾಕ್ಷಿ ಮೇಘಶ್ರೀ ಅವರ ಈ ಬೆಳವಣಿಗೆ. ಅಸಲಿಗೆ ಆಕೆಗೆ ಚಲನಚಿತ್ರ ಕಿರುತೆರೆಗಳಲ್ಲಿ ಅಭಿನಯಿಸುವ ಆಸೆಯೇ ಇರಲಿಲ್ಲ ಆದರೆ ಬಂದ ಅವಕಾಶ ಆಕೆಯನ್ನು ಎತ್ತರೆತ್ತರಕ್ಕೆ ಕೊಂಡೊಯ್ಯುತ್ತಾ ಹೋಯಿತು. ಇದೀಗ ಅತಿ ದೊಡ್ಡ ಯಶಸ್ಸಿನ ಹಂತಕ್ಕೆ ತಂದು ನಿಲ್ಲಿಸಿದೆ. ಹೇಗಾಯ್ತು ಇದೆಲ್ಲ? ಓವರ್ ಟು ಮೇಘಶ್ರೀ.
“ಬೇಸಿಕಲಿ ನಾವು ಕನ್ನಡದವರು. ತೀರ್ಥಹಳ್ಳಿ ನಮ್ಮ ಊರು. ಆದರೆ ನಾನು ಹುಟ್ಟಿ ಬೆಳೆದದ್ದೆಲ್ಲ ಬೆಂಗಳೂರು. ಈಗಲೂ ಕೂಡ ಅಪ್ಪ-ಅಮ್ಮ ಎಲ್ಲರ ಜೊತೆ ನಾನು ಬೆಂಗಳೂರಿನಲ್ಲೇ ಸೆಟಲ್ ಆಗಿದ್ದೇನೆ. ಶೂಟಿಂಗ್ ಇದ್ದಾಗ ಮಾತ್ರ ಉತ್ತರ ಭಾರತ ಮತ್ತು ಹೈದರಾಬಾದಿಗೆ ತೆರಳುತ್ತಾ ಇರುತ್ತೇನೆ.”
“ನಾನು ಓದಿನಲ್ಲಿ ತುಂಬಾ ಆಸಕ್ತಿ ಇಟ್ಟುಕೊಂಡಿದ್ದವಳು. ಮುಂದೆ ಒಂದು ದಿನ ಸರ್ಕಾರಿ ಉದ್ಯೋಗ ಹಿಡಿಯಬೇಕು. ಅದರಲ್ಲೂ ಐಎಎಸ್ ಆಫೀಸರ್ ಆಗಬೇಕು ಎಂಬ ಬಯಕೆಯಿಂದ ಕುಡುಮಿ ಎನಿಸಿಕೊಂಡಿದ್ದವಳು. ಓದನ್ನು ಬಿಟ್ಟು ನನ್ನ ಗಮನ ಬೇರೆ ಕಡೆ ಇರಲಿಲ್ಲ. ಆದರೆ ನಮ್ಮ ಮನೆಯ ಹತ್ತಿರವೇ ಎಚ್‌ಎಎಲ್ ಕಲಾವಿದರ ಸಂಘ ಇತ್ತು. ಅಲ್ಲಿ ಪ್ರತಿ ವಾರ ಯಾವುದಾದರೂ ನಾಟಕದ ಕಾರ್ಯಕ್ರಮ ಇದ್ದೇ ಇರುತ್ತಿತ್ತು. ಆಗಿನ್ನೂ ನಾನು ಚಿಕ್ಕ ಹುಡುಗಿ. ಅವರಿಗೊಂದು ಚಿಕ್ಕ ಹುಡುಗಿ ಪಾತ್ರಕ್ಕೆ ಯಾರಾದರೂ ಬೇಕಿತ್ತು. ಎದುರು ಮನೆಯಲ್ಲೇ ಇದ್ದ ನಾನು ಈ ತಂಡದ ಕಣ್ಣಿಗೆ ಬಿದ್ದೆ. ಕರೆದು ನಿಲ್ಲಿಸಿ ಒಂದು ಪಾತ್ರ ಮಾಡಿಸಿದರು. ಆಸಕ್ತಿ ಹೆದರಿಕೆ ಎರಡೂ ಇಲ್ಲದಿದ್ದ ನಾನು ಸಹಜ ಕುತೂಹಲದಿಂದ ಅಭಿನಯಿಸಿದೆ. ಅದು ಅವರಿಗೆ ಇಷ್ಟವಾಗಿಬಿಟ್ಟಿತ್ತು. ಅಲ್ಲಿಂದ ಹೈಸ್ಕೂಲ್ ಮುಗಿಯುವುದರ ಒಳಗೆ 25 ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸುವ ಹಾಗೆ ಆಯಿತು.
ಈ ತಂಡದ ಕೆಲವರ ಸಂಪರ್ಕದಿಂದಲೇ ನನಗೆ ತೆಲುಗು ಚಿತ್ರರಂಗದ ಕರೆ ಬಂದದ್ದು. ನಿನ್ನೆ ಡ್ರಾಮಾ ಮಾಡಿದ ಹಾಗೆಯೇ ಇವತ್ತು ಸಿನಿಮಾ ಮಾಡುತ್ತಿದ್ದೇನೆ ಅಷ್ಟೇ ಎಂಬ ನಿರಾಳ ಭಾವದಲ್ಲಿ ಆದರೆ ಆಗಲಿ ನನಗೇನಾಗಬೇಕು ಅಂತ ಯೋಚಿಸುತ್ತಲೇ ಬಣ್ಣ ಹಚ್ಚಿ ಪಾತ್ರ ಮಾಡಿದ ಮೊದಲ ಸಿನಿಮಾ ತೆಲುಗಿನ ಪಂಚಮುಖಿ. ಅಲ್ಲೇ ದೊರೆತ ಪರಿಚಯಗಳಿಂದ ಇನ್ನೆರಡು ಚಿತ್ರಗಳಲ್ಲಿ ಅಭಿನಯಿಸಿದೆ.
ಅದೇ ಸಮಯಕ್ಕೆ ಕೂಡ್ಲು ರಾಮಕೃಷ್ಣ ಅವರ ಮಾರ್ಚ್ 22 ಎಂಬ ಕನ್ನಡ ಚಿತ್ರಕ್ಕೆ ಆಯ್ಕೆಯಾದೆ. ಅದೇ ನನ್ನ ಮೊದಲ ಕನ್ನಡ ಚಿತ್ರ. ‘ಕೃಷ್ಣತುಳಸಿ’ ಸಂಚಾರಿ ವಿಜಯ್ ಜೊತೆ ನಟಿಸಿದ ಮತ್ತೊಂದು ಗಮನಾರ್ಹ ಚಿತ್ರ. ಎರಡೂ ಚಿತ್ರಗಳಲ್ಲಿ ನನ್ನ ಅಭಿನಯ ಪ್ರತಿಭೆ ಮತ್ತು ಅಂದ ಚಂದ ಸಾಕಷ್ಟು ಜನರ ಗಮನ ಸೆಳೆದಿತ್ತು. ತೆಲುಗು ಅರವಿಂದ ಸಮೇತ ವೀರರಾಘವ ಚಿತ್ರದಲ್ಲಿ ಒಂದು ಮುಖ್ಯ ಪಾತ್ರ, ಕನ್ನಡದ ದಶರಥದಲ್ಲಿ ಮತ್ತೊಂದು ಪಾತ್ರ, ಓಲ್ಡ್ ಮಾಂಕ್ ಚಿತ್ರದಲ್ಲಿ ಮತ್ತೊಂದು ಪಾತ್ರ… ಇದೆಲ್ಲಾ ಹಾಗೆಯೇ ನಡೆದುಕೊಂಡು ಹೋಗುತ್ತಿತ್ತು. ಈ ನಡುವೆ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಬೇಕು ಎಂದು ಕೂಡ ಅನಿಸಿಬಿಟ್ಟಿತು… ನನಗಲ್ಲ ನನ್ನ ಅಮ್ಮನಿಗೆ.
ಸಿನಿಮಾ ಮತ್ತು ಕಿರುತೆರೆಯ ವ್ಯತ್ಯಾಸ ಏನೆಂದರೆ ಇಲ್ಲಿ ಜನ ನಮ್ಮನ್ನು ದಿನಾ ನೋಡುತ್ತಾರೆ. ನಮ್ಮ ಕುರಿತು ಮಾತನಾಡುತ್ತಾರೆ. ಪ್ರತಿಕ್ರಿಯಿಸುತ್ತಾರೆ. ಅಭಿಮಾನ ತೋರುತ್ತಾರೆ. ಹಾಗಾಗಿಯೇ ನಿರಂತರವಾಗಿ ಜನರ ಕಣ್ಣಿಗೆ ಕಾಣಿಸಿಕೊಳ್ಳುವ ಧಾರಾವಾಹಿಗಳಲ್ಲಿ ಕೂಡ ನಟಿಸಲು ಆಸಕ್ತಿ ತೋರಿದೆ. ಅಭಿನಯ ಒಂದೇ ಮುಖ್ಯವಾಗಿದ್ದರಿಂದ ಸೀರಿಯಲ್ ಆದರೇನು ಸಿನಿಮಾ ಆದರೇನು? ಅದಕ್ಕೆ ತಕ್ಕಂತೆ ಕನ್ನಡದಲ್ಲಿ ಕೆ ಎಸ್ ರಾಮ್‌ಜಿ ಅವರ ನಾಗಕನ್ನಿಕೆ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದೆ. ಇದರ ಜೊತೆಗೆ ತಾರೆ ಖುಷ್‌ಬೂ ನಿರ್ಮಾಣ ಹಾಗೂ ಅವರ ಪತಿ ಸುಂದರ್ ಸಿ ಅವರ ನಿರ್ದೇಶನದಲ್ಲಿ ಮೂಡಿ ಬಂದ ‘ಜ್ಯೋತಿ’ ಧಾರಾವಾಹಿಯಲ್ಲಿ ಕೂಡ ನಟಿಸಿದೆ. ಈ ಧಾರಾವಾಹಿಯಂತೂ ಒಟ್ಟಿಗೆ ಐದು ಭಾಷೆಗಳಲ್ಲಿ ಮೂಡಿಬಂದದ್ದು ವಿಶೇಷ.
ನಿಜ ಹೇಳ್ತೀನಿ. ನನ್ನ ಜೀವನದಲ್ಲಿ ಆದ ಅತ್ಯಂತ ದೊಡ್ಡ ಅದ್ಭುತ ಮತ್ತು ಆಶ್ಚರ್ಯದ ಸಂಗತಿ ಎಂದರೆ ಭೋಜಪುರಿ ಚಿತ್ರಗಳಲ್ಲಿ ಅಭಿನಯಿಸಲು ಶುರು ಮಾಡಿದ್ದು. ಇನ್ನೂ ಲಾಕ್ ಡೌನ್ ಆಗಿರಲಿಲ್ಲ ರೌಡಿ ಇನ್ಸ್ಪೆಕ್ಟರ್ ಎನ್ನುವಂತಹ ಒಂದು ಭೋಜಪುರಿ ಚಿತ್ರಕ್ಕೆ ನಾನು ನಾಯಕಿಯಾಗಿ ಆಯ್ಕೆಯಾದೆ. ಚಿತ್ರದ ನಾಯಕ ಕೇಸರಿ ಲಾಲ್ ಯಾದವ್ ಅವರು ಭೋಜಪುರಿ ಚಿತ್ರರಂಗದ ಯಶಸ್ವಿ ನಾಯಕ. ಅಲ್ಲಿ ಎಂಟ್ರಿ ಸಿಗುವುದಕ್ಕೆ ಮೂಲ ಕಾರಣ ತೆಲುಗು ಚಿತ್ರರಂಗದಲ್ಲಿ ನನಗೆ ಆಗಿದ್ದ ಪರಿಚಯ.
ಆ ಚಿತ್ರ ಸೂಪರ್ ಹಿಟ್ಟಾಯಿತು. ಚಿತ್ರದ ಯಶಸ್ಸು ಆನಂತರ ನನಗೆ ಮತ್ತೆರಡು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಕೊಟ್ಟಿತು. ಆ ಚಿತ್ರಗಳೂ ಸೂಪರ್ ಹಿಟ್ ಆಗಿ ಹೋಯಿತು. ಈಗ ಏನಾಗಿದೆ ಎಂದರೆ ಭೋಜಪುರಿ ಚಿತ್ರರಂಗದ ಎಲ್ಲಾ ಖ್ಯಾತ ನಟರಿಗೂ ನಾಯಕಿಯಾಗಿ ನಟಿಸುತ್ತಿದ್ದೇನೆ. ನಿರ್ದೇಶಕರು ನನಗಾಗಿ ಪಾತ್ರಗಳನ್ನು ಹೆಣೆಯುತ್ತಿದ್ದಾರೆ. ಈಗಲೂ ಲಂಡನ್‌ನಲ್ಲಿ ಚಿತ್ರೀಕರಣದಲ್ಲಿದ್ದೇನೆ. ಪ್ರಸ್ತುತ ನಾಲ್ಕು ಸಿನಿಮಾ ಇನ್ನೂ ನನ್ನ ಚಿತ್ರೀಕರಣದ ಡೇಟ್ಸ್ ಗಾಗಿ ಕಾಯುತ್ತಿದೆ. ಇದು ಮುಗಿದ ಮೇಲೆ ಇನ್ನೂ ಮೂರು ಸಿನಿಮಾ ನಟಿಸಲು ಒಪ್ಪಿಗೆ ನೀಡಿದ್ದೇನೆ. ಕೆಲವೇ ದಿನಗಳ ಹಿಂದೆ ಭೋಜಪುರಿ ಎಂಬ ಭಾಷೆ ಮತ್ತು ಚಿತ್ರರಂಗ ಇದೆ ಎಂಬುದೇ ಗೊತ್ತಿಲ್ಲದ ನಾನು ಈಗ ಸುಮಾರು 14 ಚಿತ್ರಗಳಿಗೆ ನಾಯಕಿಯಾಗಿ ನಟಿಸುತ್ತಿದ್ದೇನೆ. ಬಿಡುವಿಲ್ಲದೆ ದುಡಿಯುತ್ತಿದ್ದೇನೆ. ಇದಕ್ಕಿಂತ ತುಂಬಾ ಸಂತೋಷ ಇನ್ನೇನಿದೆ.
ಲವ್ ಯು ಜಿಂದಗಿ !
