ಕನ್ನಡದ ಹುಡುಗಿ ಜ್ಯೋತಿ ರೈ ಈಗ ತುಂಬ ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಮತ್ತು ವೆಬ್ಸೀರೀಸ್ಗಳಲ್ಲಿ ನಾಯಕಿ ಪಾತ್ರದಲ್ಲಿ ಹಾಟ್ & ಸ್ವೀಟ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಜ್ಯೋತಿ ರೈ, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿರುವ ಹಾಟ್ ಮತ್ತು ಸ್ಪೈಸಿ ಲುಕ್ ಫೋಟೋಗಳು ಸಕತ್ ವೈರಲ್ ಆಗಿದೆ.
ಈ ಜ್ಯೋತಿ ರೈ ಬೇರೆ ಯಾರೂ ಅಲ್ಲ. ಕನ್ನಡದ ಧಾರಾವಾಹಿಗಳಲ್ಲಿ ಮನೆಮಗಳಂಥಹಾ ಪಾತ್ರಗಳಲ್ಲಿ ಕಾಣಿಸಿಕೊಂಡು ಹತ್ತಾರು ವರ್ಷಗಳ ಕಾಲ ಕನ್ನಡ ಕಿರುತೆರೆ ವೀಕ್ಷಕರ ಮನಗೆದ್ದವರು. ಬಂದೇ ಬರುತಾವಾ ಕಾಲ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಪ್ರವೇಶ ನೀಡಿದ ಜ್ಯೋತಿ ರೈ ಆನಂತರದ ದಿನಗಳಲ್ಲಿ ಜೋಗುಳ, ಕಿನ್ನರಿ, ಗೆಜ್ಜೆಪೂಜೆ, ಮೂರುಗಂಟು, ಲವಲವಿಕೆ, ಅನುರಾಗ ಸಂಗಮ, ಕನ್ಯಾದಾನ, ಪ್ರೇರಣ, ಕಸ್ತೂರಿ ನಿವಾಸ ಹೀಗೆ ಸಾಕಷ್ಟು ಕನ್ನಡ ಧಾರಾವಾಹಿಗಳಲ್ಲಿ ಅಭಿನಯಿಸಿದರು. ಹತ್ತು ವರ್ಷಗಳ ಪಯಣದಲ್ಲಿ ಅವರು ನಾಯಕಿ ಪಾತ್ರದಿಂದ ಪೋಷಕನಟಿ ಪಾತ್ರಕ್ಕೆ ಬದಲಾಗುವ ಅನಿವಾರ್ಯತೆ ಕೂಡಾ ಬಂದಿತು. ಆದರೆ ಈಗ ಮತ್ತೆ ಚಕ್ರ ತಿರುಗಿದೆ. ಕನ್ನಡದಿಂದ ತೆಲುಗು ತಮಿಳಿಗೆ ವಲಸೆ ಹೋದ ಕಿರುತೆರೆ ನಾಯಕಿಯರಿಗೆ ಸಿಕ್ಕ ಗೌರವ ಈಕೆಗೂ ಸಿಕ್ಕಿದೆ ಮತ್ತು ಅವರೀಗ ಅತ್ಯಂತ ಬ್ಯುಸಿ ಚಲನಚಿತ್ರ ನಾಯಕಿಯಾಗಿ ಬದಲಾಗಿದ್ದಾರೆ.
ಇದ್ದಕ್ಕಿದ್ದ ಹಾಗೆ ಈ ರೀತಿ ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳಲು ಕಾರಣವೇನು?
ಐ ವಾಂಟ್ ಟು ಟೇಕ್ ಚಾಲೆಂಜಸ್. ಹೌದು. ನನಗೆ ಮೊದಲಿಂದಲೂ ಏನಾದರೂ ಹೊಸದು ಹೊಸದಾದ ಪ್ರಯತ್ನಗಳನ್ನು ಮಾಡುತ್ತಲೇ ಇರಬೇಕು ಎನಿಸುತ್ತಿತ್ತು. ಆಸೆಪಟ್ಟು ಸೀರಿಯಲ್ ಮಾಡಲು ಬಂದಿದ್ದರೂ ಯಾವುದೇ ಸೀರಿಯಲ್ ಮಾಡುವಾಗಲೂ ಏನೋ ಒಂದು ಒದ್ದಾಟ ಇದ್ದೇ ಇರುತ್ತೆ. ನಿಮಗೇ ಗೊತ್ತಲ್ಲಾ ಯಾರನ್ನೇ ಕೇಳಿದರೂ ಅಷ್ಟೇ, ಕೆಲದಿನಗಳ ನಂತರ ಆ ಪಾತ್ರ ಆ ಕೆಲಸಗಳು ಏಕತಾನತೆ ಅನಿಸುತ್ತದೆ. ಒಂದು ನೂರು ಎಪಿಸೋಡ್ಗಳು ಕಳೆದ ನಂತರ ಇದು ಮಾನೋಟೋನಸ್ ಬದುಕು ಎನಿಸಿಬಿಡುತ್ತದೆ. ಹಾಗೆ ಅನಿಸಿದ ಮೇಲಿಂದ ಇನ್ನೂ ಒಂಥರಾ ಹಿಂಸೆ. ಎಲ್ಲರಿಗೂ ಅದರಿಂದ ಹೊರಗೆ ಬರುವ ಅವಕಾಶ ಸಿಕ್ಕುವುದಿಲ್ಲ. ಕೆಲವರಿಗೆ ಸಿಕ್ಕಾಗ ಅದನ್ನು ಸ್ವೀಕರಿಸುವ ಧೈರ್ಯ ಇರುವುದಿಲ್ಲ. ನನಗೆ ಅಂತಹಾ ಅವಕಾಶ ಈಗ ಸಿಗುತ್ತಿದೆ. ನಾನು ಅದನ್ನು ಸ್ವೀಕರಿಸಿದ್ದೇನೆ. ಬದಲಾಗಲು ಪ್ರಯತ್ನಿಸುತ್ತಾ ಇದ್ದೇನೆ. ಸೀರಿಯಲ್ಗಳಿಂದ ಸರಿದು ವಿಶಾಲ ಅವಕಾಶಗಳಿರುವ ಸಿನಿಮಾಗಳಲ್ಲಿ ಹೊಸಹೊಸ ಪ್ರಯತ್ನಗಳಿಗೆ ಮುಂದಾಗಿದ್ದೇನೆ.
ಹಾಗಾದರೆ ನಿಮಗೆ ಸೀರಿಯಲ್ ಲೋಕ ಬೋರಾಗಿ ಹೋಯಿತಾ? ಮತ್ತೆ ಸೀರಿಯಲ್ಗಳಲ್ಲಿ ನಟಿಸುವುದಿಲ್ಲವಾ?
ಬೋರ್ ಅಂತಲ್ಲಾ. ಈಗ ಸೀರಿಯಲ್ ಲೋಕವೇ ಬದಲಾಗಿದೆ. ಹಾಗೆಯೇ ನಾವೂ ಕೂಡಾ ಬದಲಾಗಬೇಕಿದೆ. ನಾವು ಸೀರಿಯಲ್ ಲೋಕಕ್ಕೆ ಕಾಲಿಟ್ಟಾಗ ಇದ್ದದ್ದು ಲಿಮಿಟೆಡ್ ಅವಕಾಶಗಳು. ಈಗ ಹಾಗಲ್ಲ. ಹತ್ತಾರು ಚಾನಲ್ಗಳು. ಬೇಕಾದಷ್ಟು ಧಾರಾವಾಹಿಗಳು. ಮುಖ್ಯವಾಗಿ ಈಗಿನ ಧಾರಾವಾಹಿಯ ಕಥೆಗಳು. ನಮ್ಮ ಕಾಲದ ಧಾರಾವಾಹಿಗಳ ಹಾಗೆ ಸೌಮ್ಯತೆ ಇಲ್ಲ, ಭಾವನೆಗಳು, ಸಿಂಪಲ್ ಮೇಕಪ್, ಸಿಂಪಲ್ ಕಾಸ್ಟ್ಯೂಮ್, ಅದನ್ನು ಸಹಜಾಭಿನಯದಲ್ಲಿ ಎಕ್ಸ್ಪ್ರೆಸ್ ಮಾಡಬೇಕು… ಇಂಥಹದ್ದು ಯಾವುದೂ ಕಾಣುತ್ತಿಲ್ಲ. ಅಲ್ಲಿ ದೊಡ್ಡದೊಂದು ಬದಲಾವಣೆ ಆಗಿದೆ, ಅಗುತ್ತಿದೆ. ಹಾಗಾಗಿ ಈ ಬಣ್ಣದ ಜಗತ್ತು ನಂಬಿಕೊಂಡೇ ಮುಂದುವರೆಯಬೇಕೆಂದರೆ ನಾವೂ ಕೂಡಾ ಬದಲಾಗುವ ಅವಶ್ಯಕತೆ ಖಂಡಿತಾ ಇದೆ.
ಹಾಗಾದರೆ ಈಗಿನ ಸೀರಿಯಲ್ಗಳಿಗೆ ನೀವು ಒಗ್ಗುವುದಿಲ್ಲ ಅಂತ ನಿಮಗೆ ಅನಿಸಿದೆಯಾ?
ಹಾಗಲ್ಲಾ. ನಾನು ಯಾವ ಕಾಲಕ್ಕೆ ಬೇಕಾದರೂ ಸೀರಿಯಲ್ಗಳಿಗೆ ಹಿಂತಿರುಗಬಹುದು. ಯಾವುದಾದರೊಂದು ಪಾತ್ರವನ್ನು ಮಾಡಬಹುದು. ಅಕಸ್ಮಾತ್ ಈಗ ಕರೆದರೂ ಬೇರೆ ಇನ್ನಾವ ಪಾತ್ರಗಳಿಗೆ ಕರೆಯಬಹುದು? ಪೋಷಕ ಪಾತ್ರಗಳಿಗೆ ಕರೆಯಬಹುದು. ಅಮ್ಮ ಅಕ್ಕ ವಿಲನ್ ಪಾತ್ರಗಳು. ಅದನ್ನು ನಾನು ಇನ್ನೂ ನಾಲ್ಕೈದು ವರ್ಷ ಕಳೆದು ಮಾಡಬಹುದು. ಹಾಗಿದ್ದ ಮೇಲೆ ಒಮ್ಮೆ ಅಂದುಕೊಂಡ ಹಾಗೆ ಬೇರೆಬೇರೆ ಪ್ರಯತ್ನಗಳನ್ನು ಯಾಕೆ ಮಾಡಿ ನೋಡಬಾರದು? ಅದು ನನ್ನ ಈಗಿನ ಮನಃಸ್ಥಿತಿ. ನನ್ನ ಅದೃಷ್ಟವೋ ಅಥವಾ ಪ್ರಾಮಾಣಿಕ ಪ್ರಯತ್ನವೋ ಅದು ಫಲ ಕೊಡುತ್ತಿದೆ. ಹಾಗಾಗಿ ಖುಷಿಯಾಗಿದ್ದೀನಿ. ಉತ್ಸಾಹದಿಂದ ಸಿನಿಮಾ ಮತ್ತು ವೆಬ್ಸೀರೀಸ್ಗಳಲ್ಲಿ ಭಾಗವಹಿಸುತ್ತಿದ್ದೀನಿ.
ಹಾಗಾದರೆ ನಿಮಗೆ ಇನ್ನೂ ಏನೇನೋ ಸಾಹಸ ಮಾಡುವ ಪ್ಲಾನ್ ಇದೆ ಅಂತಾಯ್ತು?
ಇಲ್ಲಾ ನಾನು ಯಾವತ್ತೂ ಆ ರೀತಿ ಹೀಗೇ ಅಂತ ಎಲ್ಲವನ್ನೂ ಪ್ಲಾನ್ ಮಾಡಿದವಳಲ್ಲಾ. ನನ್ನ ವೃತ್ತಿ ಬದುಕು ಕೂಡಾ ಹಾಗೇ. ಸೀರಿಯಲ್ ಮಾಡುವಾಗ ಕೂಡಾ ಹೀರೋಯಿನ್ ಆಗ್ಲೇಬೇಕು ಅಂತ ಬಂದೋಳಲ್ಲಾ. ಆಮೇಲೂ ಕೂಡಾ ಹುಡುಕಿಕೊಂಡು ಬಂದ ಪೋಷಕ ಪಾತ್ರದ ಅವಕಾಶಗಳನ್ನ ಸ್ವೀಕರಿಸಿ ಬೆಳೆದಿದ್ದೇನೆ. ಕೆರಿಯರ್ ಅಂತ ಬಂದಾಗ ನಮ್ಮ ಪಾಲಿಗೆ ಬಂದ ಯಾವುದೇ ಅವಕಾಶಗಳನ್ನ ಗಂಭೀರವಾಗಿ ತೆಗೆದುಕೊಂಡು ಹೋಗಬೇಕಾಗುತ್ತದೆ. ಈ ಅನುಭವಗಳು ನನಗೆ ಒಂದು ಕಾನ್ಫಿಡೆನ್ಸ್ ಕೂಡಾ ಕೊಡ್ತಾ ಹೋಯ್ತು. ಈ ಕಾನ್ಫಿಡೆನ್ಸ್ ನನಗೆ ಈಗ ಹೊಸಹೊಸ ಪ್ರಯತ್ನಗಳನ್ನು ಮಾಡುವುದಕ್ಕೆ ಕೈಹಿಡಿದು ನಡೆಸುತ್ತಿದೆ.
ನಮ್ಮ ಅಸೋಸಿಯೇಷನ್ ಹೊಸ ಸ್ವರೂಪದ ಬಗ್ಗೆ ಏನನ್ಸುತ್ತೆ?
ಈ ಬದಲಾವಣೆ ಯಾವಾಗ್ಲೋ ಆಗ್ಬೇಕಾಗಿತ್ತು. ನಾನು ಆಗಾಗ ಅಸೋಸಿಯೇಷನ್ ಕಾರ್ಯಕ್ರಮಗಳಿಗೆ ಬರ್ತಾ ಇದ್ದೆ ನಿಜ. ಕಾರ್ಡ್ ಮಾಡಿಸ್ಕೋಬೇಕು ಅಂದಿದ್ರು. ಮಾಡ್ಸಿದ್ವಿ ನಿಜ. ಆದ್ರೆ ಅದೆಲ್ಲ ಯಾಕ್ ಬೇಕಿತ್ತು ನಮಗೆ? ಯಾವತ್ತೂ ನಮಗೆ ಅದರ ಅವಶ್ಯಕತೆ ಏನಿತ್ತು ಅನ್ನೋದೇ ಗೊತ್ತಾಗಿರ್ಲಿಲ್ಲ. ಆದ್ರೆ ಈ ಲಾಕ್ಡೌನ್ ಆದಾಗ ನಿಜವಾಗಲೂ ಸಂಘಟನೆ ಯಾಕ್ ಬೇಕು ಅನ್ನೋದು ಅರ್ಥ ಆಯ್ತು. ಮುಂದೆ ಇಂಥಾ ಪರಿಸ್ಥಿತಿ ಬರದೇ ಇರ್ಲಿ. ಬಂದಾಗ ನಾವೆಲ್ಲರೂ ಎದುರಿಸೋದಕ್ಕೆ ರೆಡಿಯಾಗಿರ್ಬೇಕು ಅಂದ್ರೆ ಈ ಬದಲಾವಣೆ ಆಗ್ಲೇಬೇಕಿತ್ತು.
ಬಾಕ್ಸ್ 1
ಆಕೆಗೆ ತಾನೇ ನಾಯಕಿ ಅಂತ ಗೊತ್ತೇ ಇರಲಿಲ್ಲ !
ಒಂದು ಸಹಜ ಕುತೂಹಲ ಮತ್ತು ಆಕರ್ಷಣೆಯೊಂದಿಗೆ 16 ವರ್ಷಗಳ ಹಿಂದೆಯೇ ಕನ್ನಡ ಕಿರುತೆರೆಗೆ ಕಾಲಿಟ್ಟವರು ಜ್ಯೋತಿ ರೈ. ‘ಬಂದೇ ಬರುತಾವಾ ಕಾಲ’ದಲ್ಲಿ ವೀಕ್ಷಕರಿಗೆ ಮೋಡಿ ಮಾಡಿದ್ದು ಹೊಸಲೋಕ ಒಂದನ್ನು ಕುತೂಹಲದ ಕಣ್ಣುಗಳಿಂದ ನೋಡುತ್ತಿದ್ದ ಈ ಮಗ್ದ ಹುಡುಗಿ ಮತ್ತು ಆಕೆಯ ಪಾತ್ರ. ಜೋಗುಳ ಧಾರಾವಾಹಿ ಮಾಡುವಾಗ ಕೂಡಾ ಇದು ನಾಯಕಿಯ ಪಾತ್ರ ಎಂಬುದೇ ಅರಿವಿಲ್ಲದಷ್ಟು ಮುಗ್ದೆ. ಚಿತ್ರೀಕರಣ ಶುರುವಾಗಿ ಎರಡು ತಿಂಗಳಾದರೂ ಅದರ ಅರಿವಿಲ್ಲದ ಆಕೆಗೆ ನಿರ್ದೇಶಕ ವಿನುಬಳಂಜ ಅವರು ಎದುರು ಕೂರಿಸಿಕೊಂಡು ಬಿಡಿಸಿ ಹೇಳಿದಾಗಲೇ ಅರ್ಥ ಆದದ್ದು. ಆನಂತರವೇ ತಾನು ಈ ಪಾತ್ರವನ್ನು ಇನ್ನೂ ತುಂಬ ಗಂಭೀರವಾಗಿ ತೆಗೆದುಕೊಳ್ಳಬೇಕು ಅನಿಸಿದ್ದು.
ಬಾಕ್ಸ್ 2
ಲೆಟ್ಸ್ ಮೂವ್ ಆನ್ !
ಹದಿನಾರು ವರ್ಷ ಕಳೆದ ನಂತರವೂ ಜ್ಯೋತಿ ರೈ ಈಗಲೂ ಅದೇ ಬೇಡಿಕೆ ಉಳಿಸಿಕೊಂಡಿದ್ದಾರೆ. ಆದರೆ ಕನ್ನಡ ಕಿರುತೆರೆಯಲ್ಲಲ್ಲ. ಪಕ್ಕದ ತೆಲುಗು ಚಿತ್ರರಂಗದಲ್ಲಿ. ಅಲ್ಲಿ ಈಕೆ ಈಗ ಎರಡು ಸಿನಿಮಾಗಳಿಗೆ ನಾಯಕಿ. ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಒಂದು ವೆಬ್ ಸೀರೀಸ್ ಸಿದ್ಧವಾಗಿ ಓಟಿಟಿಯಲ್ಲಿ ಬಿಡುಗಡೆಯಾಗುವ ಹಂತದಲ್ಲಿದೆ. ಮತ್ತೊಂದು ವೆಬ್ ಸೀರೀಸ್ ಚಿತ್ರೀಕರಣಕ್ಕೆ ರೆಡಿ ಆಗುತ್ತಿದೆ. ಒಂದು ಧಾರಾವಾಹಿಯಲ್ಲಿ ನಟಿಸುತ್ತಿದ್ದವರು ಈಗ ಚಲನಚಿತ್ರದ ಒತ್ತಡದಿಂದ ಆ ಧಾರಾವಾಹಿಯಿಂದ ಹೊರಗೆ ಬಂದಿದ್ದಾರೆ. ಎಷ್ಟು ಜನರಿಗೆ ಇಂಥಾ ಅದೃಷ್ಟ ಸಿಗುತ್ತದೆ ಎಂಬ ಖುಷಿ ಆಕೆಯದು. ಇದಕ್ಕೆಲ್ಲಾ ಕಾರಣ ಅವರ ಪ್ರಯತ್ನ ಮತ್ತು ನಿರ್ಧಾರ. ಜೊತೆಗೆ “ಏನೇ ಆದರೂ ಲೆಟ್ಸ್ ಮೂವ್ ಆನ್” ಎಂಬ ಮನೋಧರ್ಮ!
